ಬಳ್ಳಾರಿ: ನನ್ನ ಕೊನೆಯ ಉಸಿರು ಇರುವವರೆಗೂ ಮುಸ್ಲಿಂ ಸಮುದಾಯದಕ್ಕೆ ದ್ರೋಹ ಮಾಡಲ್ಲ. ನಾನೇನಾದರೂ ಮುಸ್ಲಿಂರಿಗೆ ದ್ರೋಹ ಬಗೆದರೆ ರಾಜಕೀಯ ನಿವೃತ್ತಿ ಹೊಂದುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಅವರು ನಗರದ ಕೌಲಬಜಾರ್ನ ಎಂ.ಆರ್. ಫಂಕ್ಷನ್ ಹಾಲ್‌ನಲ್ಲಿ ರಂಜಾನ್ ಪ್ರಯುಕ್ತ ಮಾಜಿ ಸಚಿವ ಜನಾರ್ದನರೆಡ್ಡಿ ಆಪ್ತ ಮೆಹಫೂಜ್ ಅಲಿಖಾನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ನಿಷ್ಠುರವಾದಿ, ಮನಸ್ಸಿನಲ್ಲಿ ಇರುವುದನ್ನು ಹೇಳಿ ಬಿಡುತ್ತೇನೆ, ಮತ್ತೆ ಅದನ್ನು ಮರೆತು ಬಿಡುತ್ತೇನೆ, ನಮಗೂ ನಿಮಗೂ ಇರುವ ಸಂಬಂಧವೇ ಬೇರೆ ಇದೆ. ನನ್ನ ಮನಸ್ಸಿನಲ್ಲಿ ಏನೂ ಇರಲ್ಲ ಮುಸ್ಲಿಂ ಸಮುದಾಯಕ್ಕೆ ಸದಾ ಸಹಕಾರ, ಪ್ರೀತಿ ಇರುತ್ತೆ ಎಂದು ಹೇಳಿದ್ದಾರೆ.
ಬಳಿಕ ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಭಾರತವೊಂದು ಜಾತ್ಯತೀತ ರಾಷ್ಟ್ರ. ಇಲ್ಲಿ ಹಿಂದೂಗಳು ಇರಬಹುದು ಮುಸ್ಲಿಮರು ಇರಬಹುದು ಕ್ರೈಸ್ತರೂ ಇರಬಹುದು. ಎಲ್ಲರೂ ಪ್ರೀತಿ ವಿಶ್ವಾಸದಿಂದ ಇದ್ದೇವೆ. ಜಾತಿ,ಮತದ ಭೇದವಿಲ್ಲ.ಮೊದಲು ನಾವು ಭಾರತೀಯರು. ಹಿಂದಿನಿಂದಲೂ ಹಿಂದೂ ಮುಸ್ಲಿಂ ಕ್ರೈಸ್ತರು ಬಾಂಧವ್ಯದಿಂದ ಇದ್ದೇವೆ. ನಮ್ಮಹಬ್ಬಕ್ಕೆ ಅವರು ಬರುತ್ತಾರೆ.
ಅವರ ಹಬ್ಬಕ್ಕೆ ನಾವು ಹೋಗುತ್ತೇವೆ. ನಿಮಗೆಲ್ಲರಿಗೂ ಭಗವಂತ ಒಳ್ಳೆಯದು ಮಾಡಲಿ ಎಂದು ದೇವರಿಗೆ ಬೇಡಿಕೊಳ್ಳುತ್ತೇನೆ. ಒಳ್ಳೆಯ ಯೋಚನೆ ಮಾಡಿ, ಒಳ್ಳೆಯ ಕೆಲಸ ಮಾಡಿ, ನಿಮಗೆಲ್ಲ ಭಗವಂತ ಒಳ್ಳೆಯದು ಮಾಡುತ್ತಾನೆ ನಾವೆಲ್ಲ ಭಾರತದಲ್ಲಿ ಒಳ್ಳೆಯವರಾಗಿ ಇರುವ ಬಗ್ಗೆ ವಿಚಾರ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಕ್ರೈಸ್ತ ಸಮುದಾಯದ ಬಿಷಪ್ ಹೆನ್ರಿ ಡಿ'ಸೋಜಾ, ಖಾಜಿಸಾಬ್, ಖಾಜಿ ಖಾನ್‌ಸಾಬ್, ಕಮ್ಮರಚೇಡು ಸಂಸ್ಥಾನ ಮಠದ ಕಲ್ಯಾಣಶ್ರೀ, ಬುಡಾ ಅಧ್ಯಕ್ಷ ಪಾಲನ್ನ, ಪಾಲಿಕೆ ಸದಸ್ಯರಾದ ಗೋವಿಂದರಾಜುಲು, ಶ್ರೀನಿವಾಸ್ ಮೋತ್ಕರ್, ಕಾರ್ಯಕ್ರಮ ಆಯೋಜಿಸಿದ್ದ ಮೆಹಫೂಜ್ ಅಲಿ ಖಾನ್, ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
ಓದಿ : ಹೆಲಿಕಾಪ್ಟರ್ ಮೂಲಕ ಮೆರವಣಿಗೆ, ಜಾಗ್ವಾರ್ ಕಾರಲ್ಲಿ ಮಂಟಪ ತಲುಪಿದ ವರ- ರೈತನ ಮಗನ ಅದ್ಧೂರಿ ಮದುವೆ!