ಬಳ್ಳಾರಿ: ಆಸ್ಪತ್ರೆ, ವೈದ್ಯರೆಂದರೆ ಜನರು ಬೆಚ್ಚಿ ಬೀಳುವಂತ ಕಾಲವಿದು. ಸಣ್ಣ ನೆಗಡಿ, ಕೆಮ್ಮಿಗೂ ಸಾವಿರಾರು ರೂಪಾಯಿ ಔಷಧಿ ನೀಡಿ, ಲಾಭದ ಲೆಕ್ಕ ಹಾಕುವ ವೈದ್ಯರೇ ಹೆಚ್ಚಿರುವ ಕಾಲದಲ್ಲಿ. ಇವರಿಗೆಲ್ಲ ಮಾದರಿ ಎಂಬಂತೆ ಗಡಿನಾಡ ವೈದ್ಯರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಗಡಿ ಜಿಲ್ಲೆಯ ವಿವಿಧ ಗ್ರಾಮಗಳ ಕೂಲಿ-ಕಾರ್ಮಿಕರಿಗೆ, ಬಡವರಿಗೆ ಡಾ. ಪರಸಪ್ಪ ಬಂದ್ರಕಳ್ಳಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದು. ಸುಮಾರು 3 ಸಾವಿರಕ್ಕೂ ಅಧಿಕ ವೃದ್ಧರಿಗೆ ಉಚಿತವಾಗಿ ನೇತ್ರ ಚಿಕಿತ್ಸೆ ನೆರವೇರಿಸಿ ಅವರ ಬಾಳಿನ ಬೆಳಕಾಗಿದ್ದಾರೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದವರಾದ ಡಾ.ಪರಸಪ್ಪ ಬಂದ್ರಕಳ್ಳಿ, ಗ್ರಾಮೀಣ ಪ್ರದೇಶದಲ್ಲಿಯೇ ಹುಟ್ಟಿ ಬೆಳೆದವರು. ಪ್ರತಿವಾರ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸುತ್ತಾ, ಆ ಶಿಬಿರದಲ್ಲಿ ಅಂದಾಜು 30-40 ವೃದ್ಧರಿಗೆ ಕಣ್ಣಿನ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಇಲ್ಲಿನ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಯ ನೇತ್ರದಾನ ವಿಭಾಗದಲ್ಲಿ ಪ್ರಾಧ್ಯಪಕರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಇಲ್ಲಿನ ನಿತ್ಯ ಜ್ಯೋತಿ ಸಂಸ್ಥೆಗೆ ₹ 40 ಲಕ್ಷ ಅನುದಾನವನ್ನು ನೀಡಿರುವುದು, ಇವರ ಗರಿಮೆಗೆ ಹಿಡಿದ ಕನ್ನಡಿಯಾಗಿದೆ.
ಸಾವಿರಾರು ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ:
ವಿಮ್ಸ್ ಅಥವಾ ಖಾಸಗಿ ಕ್ಲಿನಿಕ್ಗೆ ಯಾರೇ ರೋಗಿಗಳು ಬರಲಿ ಉಚಿತವಾಗಿ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸುತ್ತಾರೆ. ಪ್ರತಿ ತಿಂಗಳು ಅವರ ಖಾಸಗಿ ಕ್ಲಿನಿಕ್ ಬಳ್ಳಾರಿ ನೇತ್ರಾಲಯದಲ್ಲಿ ಸರಿಸುಮಾರು 20ಕ್ಕೂ ಹೆಚ್ಚು ವಯೋ ವೃದ್ಧರ ನೇತ್ರ ಚಿಕಿತ್ಸೆ ನಡೆಯುತ್ತದೆ ಎಂದು ಡಾ.ಪರಸಪ್ಪ ತಿಳಿಸಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯ ಕೂಡ್ಲಿಗಿ, ಸಿರುಗುಪ್ಪ ಹಾಗೂ ಹಡಗಲಿ ಮತ್ತು ಹಗರಿ ಬೊಮ್ಮನಹಳ್ಳಿ ಸೇರಿದಂತೆ ರಾಯಚೂರು, ಕೊಪ್ಪಳ ಹಾಗೂ ನೆರೆಯ ಆಂಧ್ರ ಪ್ರದೇಶದ ಗಡಿಗ್ರಾಮಗಳಾದ ಆಲೂರು, ಆದೋನಿ ಸೇರಿ ಇತರೆಡೆಗಳಿಂದ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ.