ಬಳ್ಳಾರಿ : ಜಿಲ್ಲೆಯಲ್ಲಿ ಆಪರೇಷನ್ ಕಮಲದ ಆಟ ನಡೆಯದು. ಈಗಾಗಲೇ ಕಮಲಪಾಳಯ ಸೋತು ಸುಣ್ಣಾಗಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಕೆ ಸಿ ಕೊಂಡಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ನಿವಾಸದಲ್ಲಿ ಈಟಿವಿ ಭಾರತದೊಂದಿಗೆ ಮಾತಾಡಿದ ಅವರು, ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಆಯ್ಕೆಯ ವಿಳಂಬದ ವಿಚಾರದಲ್ಲಿ ಆಪರೇಷನ್ ಕಮಲ ನಡೆತಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೆಲ್ಲಾ ಶುದ್ಧ ಸುಳ್ಳು.
ಬಿಜೆಪಿಯವರು ಈಗಾಗಲೇ ಸೋತು ಸುಣ್ಣಾಗಿದ್ದಾರೆ. ಈ ಹಿಂದೆ ಇಂಥಹ ದುಸ್ಸಾಹಕ್ಕೆ ಕೈ ಹಾಕಿ ಕೈಸುಟ್ಟುಕೊಂಡಿದ್ದಾರೆ. ಇನ್ಮುಂದೆ ಬಿಜೆಪಿಯವರ ಆಟ ಸಾಗದು. ಅದು ನಮ್ಮ ಜಿಲ್ಲೆಯ ಮಟ್ಟಿಗಂತೂ ಮೊದಲೇ ಸಾಗೋಲ್ಲ ಎಂದು ಹೇಳಿದರು. ಆಪರೇಷನ್ ಕಮಲಕ್ಕೆ ಒಳಗಾಗುವಂತಹ ದುರ್ಬಲ ಮಹಾನಗರ ಪಾಲಿಕೆ ಸದಸ್ಯರು ನಮ್ಮಲ್ಲಿ ಇಲ್ಲ. ಕಾಂಗ್ರೆಸ್ನ ಸದಸ್ಯರು ಬಲಿಷ್ಠರಿದ್ದಾರೆ. ಅಷ್ಟೇ ಪ್ರಭಾವಿ ಹಾಗೂ ಪ್ರತಿಭಾವಂತರೂ ಇದ್ದಾರೆ. ಆಪರೇಷನ್ ಕಮಲಕ್ಕೆ ನಮ್ಮವರು ಸೊಪ್ಪು ಹಾಕೋಲ್ಲ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಬಂದಿದೆ. ಮೇಯರ್-ಉಪ ಮೇಯರ್ ಆಗಿ ನಮ್ಮ ಪಕ್ಷದವರೇ ಆಯ್ಕೆ ಆಗುತ್ತಾರೆ. ಅದರಲ್ಲೇನೂ ಎರಡು ಮಾತಿಲ್ಲ. ರಾಜ್ಯ ಸರ್ಕಾರ ಕೋವಿಡ್ ಕಾರಣ ಹೇಳಿ ಮುಂದಿನ ಆರು ತಿಂಗಳಿಗೆ ಆಯ್ಕೆಯ ಪ್ರಕ್ರಿಯೆಯನ್ನ ಮುಂದೂಡಿದೆ. ಗೆಜೆಟ್ ನೋಟಿಫಿಕೇಷನ್ ಮುದ್ರಿಸಲು ಸರ್ಕಾರಿ ಮುದ್ರಣಾಲಯ ಬಂದ್ ಆಗಿದೆ.
ಸೋಮವಾರದ ಹೊತ್ತಿಗೆ ಈ ಗೆಜೆಟ್ ನೋಟಿಫಿಕೇಷನ್ ಆಗಬಹುದು. ಬಳಿಕ, ಮೇಯರ್-ಉಪಮೇಯರ್ ಆಯ್ಕೆಯ ಪ್ರಕ್ರಿಯೆ ನಡೆಯಬಹುದು ಎಂದರು. ರಾಜ್ಯ ಸರ್ಕಾರ ಸದ್ಯ ಎಲ್ಲವನ್ನೂ ಹಂತ ಹಂತವಾಗಿ ಆನ್ಲಾಕ್ ಮಾಡುತ್ತಿದೆ. ಮೇಯರ್-ಉಪಮೇಯರ್ ಆಯ್ಕೆ ಪ್ರಕ್ರಿಯೆಗೂ ವಿನಾಯಿತಿ ನೀಡಬೇಕೆಂದು ಎಂಎಲ್‌ಸಿ ಕೊಂಡಯ್ಯ ರಾಜ್ಯ ಸರ್ಕಾರವನ್ನ ಆಗ್ರಹಿಸಿದರು.