ಬಳ್ಳಾರಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಹೇಳಿಕೆಗಳಿಂದ ಯಾವುದೇ ಗೊಂದಲವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.
ನಗರದ ಹೊರವಲಯದ ಅಲ್ಲಿಪುರ ಕೆರೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ನಾಯಕರ ಹೇಳಿಕೆಯಿಂದ ಈ ಮೈತ್ರಿ ಸರ್ಕಾರದಲ್ಲಿ ಗೊಂದಲ ಉಂಟಾಗಿಲ್ಲ. ಮುಂದಿನ ನಾಲ್ಕು ವರ್ಷಗಳ ಕಾಲ ಈ ಸರ್ಕಾರ ಸುಭದ್ರವಾಗಿರಲಿದೆ. ಯಾವುದೇ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ. ದೇವೇಗೌಡರು ಹಾಗೂ ವೀರಪ್ಪ ಮೊಯ್ಲಿ ಅವರಿಬ್ಬರೂ ಹಿರಿಯರು. ಅವರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರಷ್ಟೇ.. ಅವರ ಹೇಳಿಕೆಗಳಿಂದ ಯಾವುದೇ ಗೊಂದಲ ಸೃಷ್ಠಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲಿಪುರ ಕೆರೆಗೆ ವರ್ಷಪೂರ್ತಿ ಜಲಾಶಯದ ನೀರು:
ಬಳ್ಳಾರಿ ನಗರ ಹೊರವಲಯದ ಅಲ್ಲಿಪುರ ಕೆರೆಗೆ ವರ್ಷಪೂರ್ತಿ ತುಂಗ ಭದ್ರಾ ಜಲಾಶಯದ ನೀರನ್ನು ಪೂರೈಸಲು ಅಗತ್ಯ ಕ್ರಮ ಜರುಗಿಸಲಾಗುವುದು. ಮಹಾನಗರಕ್ಕೆ ಶಾಶ್ವತವಾಗಿ 12 ತಿಂಗಳ ಕಾಲ ನೀರು ಪೂರೈಸುವುದಕ್ಕಾಗಿ ತುಂಗಭದ್ರಾ ಜಲಾಶಯದಿಂದ ಪೈಪ್ ಲೈನ್ ಮೂಲಕ ನೀರು ತರುವಂತೆ ಕ್ರಮವಹಿಸಲಾಗುವುದು. ಈಗಾಗಲೇ ಬಳ್ಳಾರಿ ಮಹಾನಗರ ಪಾಲಿಕೆಯಿಂದ ಪ್ರಸ್ತಾವನೆ ಬಂದಿದೆ. ಜಿಲ್ಲೆಯಲ್ಲಿ ಭೀಕರ ಬರದ ಛಾಯೆ ಆವರಿಸಿದ್ದರಿಂದ ಜನರು ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯವ್ಯಾಪಿ ಪ್ರವಾಸ ಕೈಗೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ.
ತುಮಕೂರಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ರಸ್ತೆ ಪಕ್ಕ ಬಿಜೆಪಿ ಬ್ಯಾನರ್ ಕಟ್ಟಿದ್ದಕ್ಕೆ ನೋಟಿಸ್ ಜಾರಿಗೊಳಿಸಿರುವ ವಿಚಾರದ ಕುರಿತು ನನಗೆ ಮಾಹಿತಿಯಿಲ್ಲ. ಅಂತಹ ಸಣ್ಣ ಪುಟ್ಟ ವಿಚಾರದ ಗೋಜಿಗೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಹೋಗುವುದಿಲ್ಲ. ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿರಬಹುದು ಎಂದರು.
ಈ ವೇಳೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀನಿವಾಸ ಮೋತ್ಕರ್ ಉಪಸ್ಥಿತರಿದ್ದರು.