ಬಳ್ಳಾರಿ: ಕಾಂಗ್ರೆಸ್ ವಿರೋಧ ಪಕ್ಷವೇ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು. ಬಳ್ಳಾರಿ ನಗರದ ಬಸವ ಭವನದಲ್ಲಿ ನಿನ್ನೆ (ಮಂಗಳವಾರ) ಸಂಜೆ ನಡೆದ ಬಿಜೆಪಿ ಬೃಹತ್ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಛಾಟಿಸಿದರು. ನಂತರ ಮಾತನಾಡಿದ ಅವರು, ಇಂದಿರಾಗಾಂಧಿ ಕಾಲದಲ್ಲಿದ್ದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ದುಸ್ಥಿತಿಯೇ ಬೇರೆ ಎಂದು ಟೀಕಿಸಿದರು.
ಇಂದು ಕಾಂಗ್ರೆಸ್ನಿಂದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಚುನಾವಣೆಗೆ ನಿಂತರೆ ಸೋಲುತ್ತಾರೆ. ಕಾಂಗ್ರೆಸ್ ಅಧಃಪತನಕ್ಕೆ ತಲುಪಿದೆ ಕಟೀಲ್ ಹಾರಿಹಾಯ್ದರು. ದೇಶಾದ್ಯಂತ ಪರಿವರ್ತನೆಯಾಗಿದ್ದು, ಕಾಂಗ್ರೆಸ್ ಮುಕ್ತವಾಗ್ತಿದೆ ಎಂದರು.
ಅಮೆರಿಕಾ ಭಾರತ ನನ್ನ ಆತ್ಮೀಯ ದೇಶ, ಮೋದಿ ನಮ್ಮ ಮಿತ್ರ ಎನ್ನುತ್ತದೆ. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಭಾರತವನ್ನ ಹಾವಾಡಿಗ ದೇಶ ಅಂತಾ ಕರೆದಿದ್ದರು. ಉಕ್ರೇನ್ ಯುದ್ಧ ನಿಲ್ಲಿಸುವಂತೆ ನಾನಾ ದೇಶದ ಅಧ್ಯಕ್ಷರು ಭಾರತಕ್ಕೆ ಮನವಿ ಮಾಡುತ್ತಿದ್ದಾರೆ. ಅರಬ್ ದೇಶದಲ್ಲಿ 24 ಎಕರೆ ಜಮೀನಿನಲ್ಲಿ ಗಣಪತಿ ಗೋಪುರ ನಿರ್ಮಾಣ ಮಾಡಿದ್ದು ನರೇಂದ್ರ ಮೋದಿ ಆಡಳಿತ. ಹಿಂದೆ ಭಾರತ ದೇಶದ ಮೇಲೆ ಪಾಕಿಸ್ತಾನ ಆಕ್ರಮಣ ಮಾಡಿತ್ತು. ಆದರೆ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೇಲೆ ಎಲ್ಲರೂ ತಣ್ಣಗಾಗಿದ್ದಾರೆ. ಇಡೀ ಜಗತ್ತಿನಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ಕೊಟ್ಟಿದ್ದು ಮೋದಿ ಸರ್ಕಾರ. ಕಾಂಗ್ರೆಸ್ ನಾಯಕರು ಮೊದಲು ಟೀಕೆ ಮಾಡಿ, ರಾತ್ರಿ ಹೊತ್ತಲ್ಲಿ ಕದ್ದುಮುಚ್ಚಿ ಲಸಿಕೆ ಹಾಕಿಸಿಕೊಂಡರು. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಭಾರತೀಯ ಜನತಾ ಪಾರ್ಟಿಯತ್ತ ನೋಡುತ್ತಿದೆ ಎಂದು ಮೋದಿ ಆಡಳಿತವನ್ನು ಕೊಂಡಾಡಿದರು.
ನಂತರ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಸಂಪೂರ್ಣ ನೆಲಕ್ಕಚಿದೆ. ಇಡೀ ದೇಶಾದ್ಯಂತ ಇರುವ ಬಿಜೆಪಿ ಅಲೆ ಇದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿಯನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿದ್ದಾರೆ. ಮೋದಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 6 ಸಾವಿರ ಹಾಗೂ ರಾಜ್ಯದ ಮೂಲಕ 4 ಸಾವಿರ ಸೇರಿ 10 ಸಾವಿರ ಹಣ ನೀಡುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ಅಪ್ರಬುದ್ಧ ವ್ಯಕ್ತಿ. ಎಲ್ಲಿಯವರೆಗೆ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರಾಗಿರುತ್ತಾರೋ ಅಲ್ಲಿಯವರೆಗೆ ಕಾಂಗ್ರೆಸ್ಗೆ ಮುಕ್ತಿ ಇಲ್ಲ. ಕಾಂಗ್ರೆಸ್ ಇನ್ನೂ ಅಧೋಗತಿಗೆ ಹೋಗುತ್ತದೆ. ಮೋದಿಯವರಿಗೆ ಪರ್ಯಾಯ ನಾಯಕರು ಯಾರೂ ಇಲ್ಲ. ಮೋದಿ ಹೇಳಿದಂತೆ ಕಾಂಗ್ರೆಸ್ ಮುಕ್ತ ಭಾರತವಾಗಿದ್ದು, ಕಾಂಗ್ರೆಸ್ ಐಸಿಯುನಲ್ಲಿದೆ. ಪಂಜಾಬ್ನಲ್ಲಿ ಸಿಧು, ಕರ್ನಾಟಕದಲ್ಲಿ ಸಿದ್ದು ಈ ಇಬ್ಬರು ಸಾಕು ಕಾಂಗ್ರೆಸ್ ಮುಗಿಸಲು. ಸಿದ್ದರಾಮಯ್ಯ ಡಿಕೆಶಿಗೆ ಹೊಂದಾಣಿಕೆ ಇಲ್ಲ, ಇವರು ಜಗಳದ ಮೂಲಕವೇ ಕಾಂಗ್ರೆಸ್ಗೆ ಇತಿಶ್ರೀ ಹೇಳುತ್ತಾರೆ. 2023 ರಲ್ಲಿ ಬಿಜೆಪಿ 150 ಸೀಟು ಗೆದ್ದು ಅಧಿಕಾರ ಹಿಡಿಯುವುದು ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ, ತೇಜಸ್ವಿನಿ ಅನಂತ್ ಕುಮಾರ್, ಶಾಸಕ ಸೋಮಶೇಖರ್ ರೆಡ್ಡಿ, ಸಂಸದ ದೇವೇಂದ್ರಪ್ಪ ಸೇರಿದಂತೆ ಇತರ ಪ್ರಮುಖರು ಭಾಗವಹಿಸಿದ್ದರು.
ಇದನ್ನೂ ಓದಿ: 'ಆರಕ್ಷಕರ ಮೇಲೆ ದಾಳಿ ಮಾಡಿದ ಅಲ್ಪಮತೀಯರನ್ನು ಅಮಾಯಕರೆನ್ನಲು ನೀವು ಯಾರು?'