ಬಳ್ಳಾರಿ: ಕೋವಿಡ್-19 ವೈರಸ್ ಸಂಬಂಧ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಇಲ್ಲಿನ ರೂಪನಗುಡಿ ರಸ್ತೆಯಲ್ಲಿ ನೆಲೆಸಿರುವ ಬಡ ಕೂಲಿ ಕಾರ್ಮಿಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ದಿನಸಿ ಕಿಟ್ಗಳನ್ನ ವಿತರಿಸಿದ್ರು.
ನಂತರ ಮಾತನಾಡಿದ ಅವರು, ಕೋವಿಡ್ -19 ಗೆ ಸಂಬಂಧಿಸಿದಂತೆ ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಪ್ರತಿಪಕ್ಷದ ನಾಯಕರೂ ಸೇರಿದಂತೆ ಸಿಎಂ ಬಿಎಸ್ವೈ ಹಾಗೂ ಸಚಿವರು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೆಲವೊಂದು ಜಿಲ್ಲೆಗಳಲ್ಲಿ ಕೋವಿಡ್-19 ವೈರಸ್ ಹಬ್ಬಿಲ್ಲ. ಅಂತಹ ಜಿಲ್ಲೆಗಳಲ್ಲಿ ನಿಯಮ ಸಡಿಲಿಕೆಗೊಳಿಸುವ ವಿಚಾರವನ್ನು ಪ್ರಸ್ತಾಪಿಸುವುದಾಗಿ ತಿಳಿಸಿದ್ರು.
ಇನ್ನು ಬಳ್ಳಾರಿಯಲ್ಲಿ ಕೇವಲ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹೊಸಪೇಟೆಯಲ್ಲಿ ಅಂದಾಜು 11 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬಳ್ಳಾರಿ ನಗರದಲ್ಲಿ ಕೆಲ ನಿಯಮಗಳನ್ನು ಸಡಿಲಿಕೆಗೊಳಿಸುವ ವಿಚಾರವನ್ನೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸುವುದಾಗಿ ಸಚಿವ ಶ್ರೀರಾಮುಲು ಹೇಳಿದರು.
ಈ ವೇಳೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹಾಗೂ ಸಚಿವ ಶ್ರೀರಾಮುಲು, ಮಾಜಿ ಶಾಸಕ ಟಿ.ಹೆಚ್. ಸುರೇಶಬಾಬು ಉಪಸ್ಥಿತರಿದ್ದರು. ಇಂದು ಅಂದಾಜು ನೂರಾರು ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನ ವಿತರಿಸಿದ್ರು. ಕೆಲವರು ಸಾಲು ಸಾಲಾಗಿ ಬಂದು ಕಿಟ್ ತೆಗೆದುಕೊಂಡರೆ, ಇನ್ನೂ ಕೆಲವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಸೇರಿಕೊಂಡಿದ್ದರು. ಸಚಿವರ, ಶಾಸಕರ ಸುತ್ತಲು ಜನಜಂಗುಳಿ ಕೂಡಿತ್ತು. ಈ ವೇಳೆ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ರೂ ಕೂಡ ಜನ ಮಾತ್ರ ಗುಂಪುಗುಂಪಾಗಿಯೇ ಇದ್ದರು.