ಬಳ್ಳಾರಿ: ರಾಜ್ಯ ಸರ್ಕಾರ ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667 ಎಕರೆ ಭೂಮಿ ನೀಡುತ್ತಿರುವುದನ್ನು ವಿರೋಧಿಸಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಕಾರ್ಖಾನೆಯ ಮುಖ್ಯ ದ್ವಾರದ ಬಳಿ ಬ್ಯಾರಿಕೇಡ್ ತಳ್ಳಿ ಪ್ರವೇಶದ್ವಾರದೊಳಗೆ ನುಗ್ಗಲು ಯತ್ನಿಸಿದ ಕನ್ನಡಪರ ಸಂಘಟನೆಗಳ ಮುಖಂಡ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ವಿವಿಧ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಜಿಂದಾಲ್ ಉಕ್ಕು ಕಾರ್ಖಾನೆ ಬಳಿ ಇಂದು ಜಮಾಯಿಸಿ ರಾಜ್ಯ ಸರ್ಕಾರ ಹಾಗೂ ಜಿಂದಾಲ್ ಸಮೂಹ ಸಂಸ್ಥೆಗಳ ಮಾಲೀಕರ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಬ್ಯಾರಿಕೇಡ್ ತಳ್ಳಿ ಪ್ರವೇಶದ್ವಾರದೊಳಗೆ ನುಗ್ಗಲು ಯತ್ನಿಸಿದ ವಾಟಾಳ್ ನಾಗರಾಜ್ ಹಾಗೂ ಇತರರನ್ನು ತೋರಣಗಲ್ನ ಪೊಲೀಸರು ಬಂಧಿಸಿ ವಾಹನದೊಳಗೆ ಕರೆದೊಯ್ದರು. ಇದಕ್ಕೂ ಮುಂಚೆ ಕಾರಿನಿಂದ ಕೆಳಗಿಳಿದ ವಾಟಾಳ್ ನಾಗರಾಜ್ ಅವರನ್ನು ತೋರಣಗಲ್ಲಿನ ಪಿಎಸ್ಐ ಮಹಮ್ಮದ್ ರಫಿ, ಪರವಾನಗಿ ಹೊಂದಿರದ ಕಾರಣ ಬ್ಯಾರಿಕೇಡ್ ಒಳಗೆ ನಿಂತುಕೊಂಡೇ ಪ್ರತಿಭಟನೆ ನಡೆಸುವಂತೆ ಸೂಚಿಸಿದರು.
ನಂತರ ಮಾತನಾಡಿದ ಕನ್ನಡಪರ ಸಂಘಟನೆಗಳ ಮುಖಂಡ ವಾಟಾಳ್ ನಾಗರಾಜ್, ಜಿಂದಾಲ್ ಉಕ್ಕು ಕಾರ್ಖಾನೆಗೆ ಸಾವಿರಾರು ಎಕರೆ ಭೂಮಿ ಪರಭಾರೆ ಕುರಿತು ತನಿಖೆ ನಡೆಸುವ ಸಲುವಾಗಿ ರಾಜ್ಯ ಸರ್ಕಾರ ರಚಿಸಿರುವ ಉಪ ಸಮಿತಿ ಮೋಸದ ಸಮಿತಿ. ಆ ಉಪ ಸಮಿತಿಯಲ್ಲಿ ಯಾರಿದ್ದಾರೆ ಹೇಳಿ?. ನಿಮ್ಮ ಸರ್ಕಾರದ ಸಚಿವರುಗಳೇ ಉಪ ಸಮಿತಿಯಲ್ಲಿದ್ದಾರೆ. ಹೀಗಾಗಿ, ಉಪ ಸಮಿತಿಯಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನೇ ನೇಮಕ ಮಾಡಬೇಕು. ಅವರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಂದಾಲ್ ಉಕ್ಕು ಕಾರ್ಖಾನೆಯು ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸುವಲ್ಲಿ ವಿಫಲವಾಗಿದೆ. ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದೆ. ಹಾಗಾಗಿ, ಜಿಂದಾಲ್ ಸಮೂಹ ಸಂಸ್ಥೆಗಳ ಮಾಲೀಕರ ವಿರುದ್ಧದ ಹೋರಾಟವನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದರು.