ಬಳ್ಳಾರಿ: ಹಾಸನ, ಮಂಡ್ಯ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್- ಕಾಂಗ್ರೆಸ್ ಪಕ್ಷಗಳ ನಡುವೆ ಗೊಂದಲವಿದೆ. ಹೀಗಾಗಿ, ಆ ಎರಡು ಪಕ್ಷಗಳಲ್ಲಿ ಪರಸ್ಪರ ಚೂರಿ ಹಾಕಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಜಿಲ್ಲೆಯ ಹೊಸಪೇಟೆ ನಗರದ ಖಾಸಗಿ ಹೋಟೆಲ್‍ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ, ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಈ ಸರ್ಕಾರಕ್ಕೆ ಉಳಿಗಾಲವಿಲ್ಲ. ಈಗಾಗಲೇ ಈ ಕುರಿತು ದೇವೇಗೌಡರು ಹೇಳಿಕೆ ನೀಡಿದ್ದಾರೆ. ಅಲ್ಲದೆ, ಕೇಂದ್ರದಲ್ಲಿ ಬಿಜೆಪಿ ಬಂದರೂ ಮೈತ್ರಿ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಿಂದ ಕಿರುಕುಳ ಅನುಭವಿಸಲಾಗುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಅಷ್ಟೊಂದು ಕಿರುಕುಳ ನೀಡುತ್ತಿದೆ ಎಂದರು. ಕುಮಾರಸ್ವಾಮಿ ಹಾಗೂ ದೇವೇಗೌಡ ಕಣ್ಣೀರನ್ನು ಪೇಟೆಂಟ್ ಮಾಡಿಕೊಂಡಿದ್ದಾರೆ. ಅಸಹಾಯಕತೆ ಆದಾಗ ಹಾಗೂ ಜನರ ವಿಶ್ವಾಸ ಕಳೆದುಕೊಂಡಾಗ ಕಣ್ಣೀರು ಹಾಕುತ್ತಾರೆ. ಹಾಸನ ಲೋಕಸಭಾ ಕ್ಷೇತ್ರ ದೇವೇಗೌಡರ ಅಸ್ತಿಯೇ? ಯಾಕೆಂದರೆ ಮೊಮ್ಮಗನಿಗೆ ಕ್ಷೇತ್ರವನ್ನು ಬಿಟ್ಟು ಕೊಡುವಾಗ ಕಣ್ಣೀರು ಹಾಕಿದರು. ಅದ್ರೆ ರೈತರು ಆತ್ಮಹತ್ಯೆ ಮಾಡಿಕೊಂಡಾಗ ದೇವೇಗೌಡರು ಕಣ್ಣೀರು ಯಾಕೆ ಹಾಕಲಿಲ್ಲ ಎಂದು ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ಟೆಂಟ್ ಹಾಕಿದ್ದಾರೆ. ಒಂದೊಂದು ಮತಗಟ್ಟೆಗೆ ಲಕ್ಷಾಂತರ ರೂ. ಖರ್ಚು ಮಾಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಈಗಾಗಲೇ ಹಣವನ್ನು ಹಂಚಿದ್ದಾರೆ. ಆದರೆ ದೇವೇಗೌಡರ ಕುಟುಂಬಕ್ಕೆ ಸೋಲು ನಿಶ್ಚಿತ ಎಂದರು. ಎನ್‍ಡಿಎಗೆ 300 ಸ್ಥಾನಗಳು ಲಭಿಸಲಿದೆ. ಕರ್ನಾಟಕದಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ದೇಶದಲ್ಲಿ ನರೇಂದ್ರ ಮೋದಿ ಅವರ ಸುನಾಮಿ ಇದೆ. ಹಾಗಾಗಿ ನಾವು ಗೆಲ್ಲುತ್ತೇವೆ. ಆದರೆ ಸವರ ನಾಯಕರಲ್ಲಿ ಮಹಾಘಟಬಂಧನ್ ಕುರಿತು ಸ್ಪಷ್ಟತೆ ಇಲ್ಲ ಎಂದರು.