ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಪ್ರಸ್ತಾವನೆಗೆ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ಸಿಕ್ಕರೆ ಇಡೀ ಅಖಂಡ ಬಳ್ಳಾರಿಯೇ ಬೆಂಕಿಯಲ್ಲಿ ಹೊತ್ತಿಕೊಂಡು ಬಿಡುತ್ತೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕ ಆನಂದ ಸಿಂಗ್ ಅವರ ಸ್ವಹಿತಾಸಕ್ತಿಗೆ ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡೋದು ಬೇಡ. ಹಾಗೊಂದು ವೇಳೆ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬಂದು ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಅನುಮೋದನೆ ದೊರೆತಿದ್ದೇ ಆದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಶಾಸಕ ರೆಡ್ಡಿ ತಿಳಿಸಿದ್ದಾರೆ.
ಅಖಂಡ ಬಳ್ಳಾರಿ ಜಿಲ್ಲೆಯನ್ನ ಯಾರದೋ ಸ್ವಾರ್ಥಕ್ಕಾಗಿ ಒಡೆಯಬಾರದು. ಅಖಂಡ ಜಿಲ್ಲೆಯಾಗಿ ಬಳ್ಳಾರಿ ಉಳಿಯಬೇಕು. ನಾವೆಲ್ಲ ಅಣ್ಣ- ತಮ್ಮಂದಿರ ತರ ಇದ್ದೇವೆ. ಸಚಿವ ಸಂಪುಟದ ಸಭೆಯಲ್ಲಿ ಸಚಿವ ಶ್ರೀ ರಾಮುಲು ಕೂಡ ಭಾಗಿಯಾಗಿ ವಿರೋಧ ವ್ಯಕ್ತಪಡಿಸ್ತಾರೆ. ಈ ವಿಚಾರ ಚರ್ಚೆಗೆ ಬರೋಲ್ಲ. ನನಗೆ ಸಿಎಂ ಯಡಿಯೂರಪ್ಪ ಅವರು ಕೂಡ ಫೋನ್ ಮಾಡಿದ್ರು. ನಾನು ಸಂತೋಷ್ ಅವರಿಗೆ ಸಹ ಕರೆ ಮಾಡಿ ಮಾಹಿತಿ ನೀಡಿರುವೆ ಎಂದರು.