ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿಂದು ಬೆಳಗ್ಗೆಯಿಂದ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಹಲವು ಸೇತುವೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಸಾಂಖ್ಯಿಕ ಇಲಾಖೆ ಕಚೇರಿಗೆ ನೀರು ನುಗ್ಗಿದ್ದು, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಅನುಮತಿ ಮೇರೆಗೆ ಕಚೇರಿಯ ಸಿಬ್ಬಂದಿಗೆ ಮೇಲಾಧಿಕಾರಿ ಮಧ್ಯಾಹ್ನದ ರಜೆ ಘೋಷಿಸಿದರು.
ನಗರದ ರಾಯಲ್ ಕಾಲೊನಿಯಲ್ಲಿ ಗುಡಿಸಲು ಮನೆಗಳಿಗೆ ಮಳೆ ನೀರು ನುಗ್ಗಿದೆ. ಗುಡಿಸಲು ನಿವಾಸಿಗಳು ತಗ್ಗು ಪ್ರದೇಶದಲ್ಲಿ ವಾಸವಿವಿರುವುದರಿಂದ ಕೂರಲು, ನಿಲ್ಲಲು ಕೂಡ ಜಾಗ ಇಲ್ಲದಂತಾಗಿದೆ. ಮಳೆ ನೀರಿನ ಜೊತೆ ಒಳಚರಂಡಿ ನೀರು ಮಿಶ್ರಿತಗೊಂಡ ಪರಿಣಾಮ ಕಾಲೊನಿಗಳ ತುಂಬೆಲ್ಲ ದುರ್ವಾಸನೆ ಹಬ್ಬಿದೆ. ಪ್ರತಿಬಾರಿ ಮಳೆ ಸುರಿದಾಗಲೂ ಇಲ್ಲಿನ ನಿವಾಸಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಸೇತುವೆಗಳು ಜಲಾವೃತ.. ವಾಹನ ಸಂಚಾರ ಬಂದ್
ನಗರದ ಕನಕ ದುರ್ಗಮ್ಮ ದೇಗುಲ ರಸ್ತೆಯ ಕೆಳಸೇತುವೆ, ಸತ್ಯನಾರಾಯಣ ಪೇಟೆ ಕೆಳಸೇತುವೆ ಹಾಗೂ ಡಾ. ಜೋಳದರಾಶಿ ದೊಡ್ಡನಗೌಡ ರಂಗ ಮಂದಿರ ರಸ್ತೆಯ ಕೆಳಸೇತುವೆ ಮಳೆಯಿಂದಾಗಿ ಜಲಾವೃತಗೊಂಡಿವೆ. ಎಸ್ಪಿ ವೃತ್ತದಿಂದ ಕನಕ ದುರ್ಗಮ್ಮ ದೇಗುಲ ರಸ್ತೆಯ ಮಾರ್ಗ, ಗಾಂಧಿನಗರದಿಂದ ಸತ್ಯನಾರಾಯಣ ಪೇಟೆ ಕೆಳಸೇತುವೆ ರಸ್ತೆ ಮಾರ್ಗ ಮತ್ತು ಖಾಸಗಿ ಬಸ್ ನಿಲ್ದಾಣದ ರಸ್ತೆಯ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನಗರದ ಬಹುತೇಕ ಖಾಸಗಿ ಸಂಸ್ಥೆಗಳ ಕಚೇರಿಗಳು ಹಾಗೂ ಅಂಗಡಿ ಮುಂಗಟ್ಟುಗಗಳನ್ನ ಮಳೆ ಕಾರಣಕ್ಕೆ ಬಂದ್ ಮಾಡಲಾಗಿತ್ತು.
ಬಳ್ಳಾರಿ ನಗರದಲ್ಲಿ 60 ಮಿ.ಮೀಟರ್, ಹಡಗಲಿಯಲ್ಲಿ 30.6, ಹಗರಿಬೊಮ್ಮನಹಳ್ಳಿಯಲ್ಲಿ 59.4, ಹೊಸಪೇಟೆಯಲ್ಲಿ 34.0, ಕೂಡ್ಲಿಗಿಯಲ್ಲಿ 38.9, ಸಂಡೂರಿನಲ್ಲಿ ಶೇ. 92.8, ಸಿರುಗುಪ್ಪದಲ್ಲಿ 62.8, ಹರಪನಹಳ್ಳಿಯಲ್ಲಿ 21.6 ಮಿಲಿ ಮೀಟರ್ ನಷ್ಟು ಮಳೆ ದಾಖಲಾಗಿದೆ.