ಬಳ್ಳಾರಿ: ಎಲ್ಲೆಡೆ ಗಣಿಗಾರಿಕೆಯ ಧೂಳು ಕಂಡುಬರುವ ಜಿಲ್ಲೆಯಲ್ಲಿ ರೈತರು ಕೃಷಿಯಲ್ಲಿ ಸಾಧನೆ ಮಾಡುವುದು ಅಪರೂಪ. ಅದೇ ರೀತಿ ರೈತನೋರ್ವ ಬರಡು ಭೂಮಿಯಲ್ಲಿ ಹುಲುಸಾಗಿ ಜಾಮಕಾಯಿ(ಪೇರಲ) ಬೆಳೆದು ಈಗ ಕೈತುಂಬ ಹಣ ಸಂಪಾದಿಸುತ್ತಿದ್ದಾರೆ.
ಹೌದು, ರಾಯಪುರ ಮೂಲದ ತಳಿಯ ಜಾಮಕಾಯಿ ಬೆಳೆಯನ್ನು ಬರಡು ಭೂಮಿಯಲ್ಲೇ ಬೆಳೆಯುವ ಮೂಲಕ ಎಂಜಿನಿಯರಿಂಗ್ ಪದವೀಧರ ರೈತ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.
ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳು ಗ್ರಾಮದ ಅಶೋಕ ರೆಡ್ಡಿ, ತಮ್ಮ ಹತ್ತು ಎಕರೆಯ ಹೊಲದಲ್ಲಿ ಸಣ್ಣದೊಂದು ಬೋರ್ವೆಲ್ ಕೊರೆಯಿಸಿ ಬರಡಾದ ಭೂಮಿಯಲ್ಲಿ ವಿಎನ್ಆರ್ ಕಂಪನಿಯ ಕೆ ಜಿ ಜಾಮ ಅನ್ನೋ ತಳಿಯ ಜಾಮಕಾಯಿ ಬೆಳೆಯನ್ನು ಹುಲುಸಾಗಿ ಬೆಳೆದಿರುವುದಾಗಿ ಈಟಿವಿ ಭಾರತಕ್ಕೆ ತಮ್ಮ ಯಶಸ್ವಿ ಕೃಷಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಎಂಜಿನಿಯರಿಂಗ್ ಪದವೀಧರರಾದ ಅಶೋಕ್ ರೆಡ್ಡಿ, ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಊರಿಂದ ಊರಿಗೆ ವರ್ಗಾವಣೆ ಮಾಡೋದರಿಂದ ಬೇಸತ್ತ ಅವರು ತೋಟಗಾರಿಕೆ ಕೃಷಿಯತ್ತ ವಾಲಿದ್ದಾರೆ. ಆರಂಭದಲ್ಲಿ ನಷ್ಟ ಅನುಭವಿಸಿದರು ಆ ಬಳಿಕ, ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.