ಬಳ್ಳಾರಿ: ಜ. 10 ಮತ್ತು 11ರಂದು ನಡೆಯಲಿರುವ ಹಂಪಿ ಉತ್ಸವವನ್ನು ಜನರ ಉತ್ಸವವನ್ನಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಂಪಿ ಉತ್ಸವಕ್ಕೆ ಸಂಬಂಧಿಸಿದ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಛಾಯಾಚಿತ್ರ, ಕ್ರೀಡೆ, ಮಳಿಗೆಗಳು, ಚಿತ್ರಕಲೆ, ಶಿಲ್ಪಕಲೆ ಸೇರಿದಂತೆ ವಿವಿಧ ರೀತಿಯ ಸ್ಪರ್ಧಾ ಕಾರ್ಯಕ್ರಮಗಳ ಅರ್ಜಿಗಳನ್ನು ಕೂಡಲೇ ಪತ್ರಿಕಾ ಪ್ರಕಟಣೆ ನೀಡುವುದರ ಮೂಲಕ ಪ್ರಚಾರಪಡಿಸಿ ಎಂದು ಸೂಚನೆ ನೀಡಿದರು. ಪ್ರತಿಯೊಂದು ದಿನ ನಿಗದಿತ ವೇಳೆಗೆ ನಿಗದಿಪಡಿಸಿದ ಕಾರ್ಯಕ್ರಮಗಳನ್ನು ಅಚ್ಟುಕಟ್ಟಾಗಿ ನಡೆಸಬೇಕು. ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಚಾಲನೆ ನೀಡಲಿದ್ದಾರೆ. ನೂರಾರು ಕಲಾ ತಂಡಗಳು ಹಾಗೂ ಸಾವಿರಾರು ಜನರು ಈ ವೈಭವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಳೆದ ಬಾರಿಯಂತೆ ಈ ಬಾರಿಯೂ ಸಹ ಮರಳಿನಲ್ಲಿ ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆಗಳ ವೈಭವ ಅನಾವರಣವಾಗಲಿದೆ. ಇದಕ್ಕಾಗಿ ಒಡಿಸ್ಸಾದಿಂದ ಖ್ಯಾತ ಮರಳು ತಜ್ಞರು ಜ. 3ರಿಂದ ಆಗಮಿಸಲಿದ್ದು, ತಮ್ಮ ಕೆಲಸ ಶುರು ಮಾಡಲಿದ್ದಾರೆ. ಅವರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಿ ಎಂದರು. ಹೊಸಪೇಟೆ, ಕಮಲಾಪುರದಿಂದ ಹಂಪಿಯ ಕಡೆ ನಿರಂತರ ಬಸ್‌ಗಳ ಸಂಚಾರದ ವ್ಯವಸ್ಥೆ, ಕಂಟ್ರೋಲ್ ರೂಂ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸಭೆಯಲ್ಲಿ ವಿವರಿಸಿದರು.