ಬಳ್ಳಾರಿ: ಜೈಲಿನ ಒಳಗೆ ಹೋಗುವವರನ್ನು ತಪಾಸಣೆ ಮಾಡಲು ಜೈಲು ಸಿಬ್ಬಂದಿಯ ಬದಲಿಗೆ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರು ಎಷ್ಟೇ ಶಿಸ್ತಿನಲ್ಲಿ ಕರ್ತವ್ಯ ನಿರ್ವಹಿಸಿದ್ರೂ ಜೈಲಿನ ಹೊರಗಡೆಯಿಂದ ಮಾದಕ ವಸ್ತುಗಳನ್ನ ಕಾರಾಗೃಹದ ಒಳಗಡೆ ಎಸೆಯುವಂತಹ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಜೈಲಿನೊಳಗೆ ಗಾಂಜಾ ಎಸೆಯಲು ಮುಂದಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
300 ಗ್ರಾಂ ಗಾಂಜಾದ ಜೊತೆಗೆ ಪ್ರಭು ಎನ್ನುವ ವ್ಯಕ್ತಿ ಬಂಧಿಸಲಾಗಿದ್ದು, ಆತ ವಡ್ಡರಬಂಡೆಯ ನಿವಾಸಿಯಾಗಿದ್ದಾನೆ. ಕಲ್ಲೆಸೆಯುವ ಮೂಲಕ ಜೈಲಿನೊಳಗೆ ಗಾಂಜಾ ಕಳುಹಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಕಾರಾಗೃಹದ ಸುತ್ತಮುತ್ತ ಹಾಗೂ ಜೈಲಿನ ಒಳಗೆ ಹೋಗುವವರನ್ನು ತಪಾಸಣೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅದಾವತ್ ಮಾಹಿತಿ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಹೊರತುಪಡಿಸಿದರೆ, ರಾಜ್ಯದ ಅತಿ ದೊಡ್ಡದಾದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಕಾಸು ಕೊಟ್ಟವರಿಗೆ ರಾಜಾತಿಥ್ಯ ಎಂಬ ಆರೋಪವಿತ್ತು. ಇಂತಹ ಕಾನೂನು ಬಾಹಿರ ಕೃತ್ಯಗಳಿಗೆ ಬ್ರೇಕ್ ಹಾಕಲು ಸರ್ಕಾರ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಿದೆ.
ಇದನ್ನೂ ಓದಿ: ಗಂಗಾವತಿ: ಗ್ರಾಮ ಪಂಚಾಯತ್ ಕಾರ್ಯದರ್ಶಿ ನೇಣಿಗೆ ಶರಣು