ವಿಜಯನಗರ: ರೈತರ ಹಾಗೂ ಬಡವರ ಬದುಕನ್ನು ಸರಿಪಡಿಸಲು, ಪರ್ಸಂಟೇಜ್ ಸರ್ಕಾರವನ್ನು ಕಿತ್ತು ಹಾಕಿ 2023 ರ ಚುನಾವಣೆಯಲ್ಲಿ ಜೆಡಿಎಸ್ಗೆ ಸ್ವತಂತ್ರ ಅಧಿಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ರೈತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ನೀರಿನ ಹಂಚಿಕೆ ವಿಚಾರದಲ್ಲಿ ಸಮಸ್ಯೆಗಳಿವೆ. ಈ ಸರ್ಕಾರಗಳ ನಡವಳಿಕೆ ನೋಡಿದ್ರೆ ಇನ್ನೂ 100 ವರ್ಷ ಆದ್ರೂ ಸಮಸ್ಯೆ ಬಗೆಹರೆಯಲ್ಲ ಎಂದು ಟೀಕಿಸಿದರು.
ನೀರಾವರಿ ಯೋಜನೆಗಳು ವಿಳಂಬ: ತುಂಗಭದ್ರಾ ಜಲಾಶಯದ ಹೂಳನ್ನು ತೆಗೆಸುವ ಕೆಲಸ ಮಾಡಿಲ್ಲ. ಕೃಷ್ಣಾ ಮೇಲ್ದಂಡೆ, ಮಹಾದಾಯಿ ಯೋಜನೆಗಳು ಹಾಗೆಯೇ ಉಳಿದುಕೊಂಡಿವೆ. ನಿಮ್ಮ ಬದುಕು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ ಗೆಲ್ಲಿಸಿ. ಪ್ರತಿ ರೈತರ ಜಮೀನಿಗೆ ನೀರು ಕೊಡ್ತೀನಿ. ಇಲ್ಲವಾದಲ್ಲಿ ನಾನು ಪಕ್ಷವನ್ನು ವಿಸರ್ಜನೆ ಮಾಡ್ತೀನಿ ಎಂದು ಕುಮಾರಸ್ವಾಮಿ ಘೋಷಿಸಿದರು.
ರಾಜ್ಯದಲ್ಲಿರುವುದು 40% ಸರ್ಕಾರ ಅಂತಾರೆ. ಭ್ರಷ್ಟಾಚಾರ ಹೆಚ್ಚಾಗಿದೆ. ಇಂತಹ ಸರ್ಕಾರವನ್ನು ತೊಲಗಿಸಿ. ಪ್ರಧಾನಿ ಮೋದಿ ನೋಡಿ ವೋಟು ಹಾಕ್ತೀರಿ. ಬೇರೆಯವರನ್ನು ನೋಡಿ ವೋಟ್ ಹಾಕ್ತೀರಿ. ನನ್ನ ಮೇಲೆ ವಿಶ್ವಾಸ ಇದ್ರೆ, ನನ್ನ ಪಕ್ಷವನ್ನು ಗೆಲ್ಲಿಸಿ. ನನಗೆ ಸ್ವತಂತ್ರವಾಗಿ ಅಧಿಕಾರ ಕೊಡಿ ಜನರನ್ನು ಕುಮಾರಸ್ವಾಮಿ ಕೋರಿದರು.
ಓದಿ: ಪೊಲೀಸ್ ಶ್ವಾನಗಳಿಗೆ ಕೂಲರ್: ಬಳ್ಳಾರಿ ಶ್ವಾನ ದಳಕ್ಕೆ ವಿಶೇಷ ವ್ಯವಸ್ಥೆ