ಬಳ್ಳಾರಿ : ತಾಲೂಕಿನ ಚಳುಗುರ್ಕಿ ದೇವಸ್ಥಾನದ ಹತ್ತಿರದ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿ ತಂದೆ ಮಗ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ರೈತ ಸಿದ್ದಲಿಂಗಪ್ಪ (50) ಮಗ ದರ್ಶನ (14) ಮೃತರು. ಹೊಲದಲ್ಲಿ ಕೆಲಸ ಮುಗಿಸಿ ಪಕ್ಕದಲ್ಲಿಯೇ ಇದ್ದ ಕೃಷಿಹೊಂಡಕ್ಕೆ ನೀರು ಕುಡಿಯಲು ಹೋಗಿದ್ದ ದರ್ಶನ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಮಗನ್ನು ಕಾಪಾಡಲು ಹೋದ ಸಿದ್ದಲಿಂಗಪ್ಪ ಕೂಡಾ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಈ ಕುರಿತು ಮಾತನಾಡಿದ ಗ್ರಾಮದ ನಿವಾಸಿ ಸುರೇಶ್, ನರೇಗಾ ಯೋಜನೆಯಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿದ್ದಾರೆ, ಆದ್ರೆ ಅದರ ಸುತ್ತಲು ಯಾವುದೇ ಭದ್ರತೆ ಇಲ್ಲ. ಸಾಕಷ್ಟು ಜನರು ಈ ಪ್ರದೇಶದಲ್ಲಿ ಓಡಾಡುತ್ತಾರೆ. ಕೆಲ ಮಕ್ಕಳು ಈಜಾಡಲು ಸಹ ಹೋಗುತ್ತಾರೆ. ಸದ್ಯ ಭದ್ರತೆ ಇಲ್ಲದ ಕಾರಣ ಎರಡು ಜೀವಗಳು ಬಲಿಯಾಗಿವೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಕರಣ ಪರಮದೇವನಹಳ್ಳಿಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.