ಹೊಸಪೇಟೆ: ನೂತನ ವಿಜಯನಗರ ಜಿಲ್ಲೆ ರಚನೆ ಮೇಲುಸ್ತುವಾರಿಯಾಗಿ ಐಎಎಸ್ ಅಧಿಕಾರಿ ಡಾ. ರಜನೀಶ್ ಗೋಯಲ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಮಟ್ಟದಲ್ಲಿ ವಿಜಯನಗರ ಜಿಲ್ಲೆಯನ್ನು ಪ್ರಾರಂಭಿಸಲು ಎಲ್ಲಾ ಪೂರ್ವ ಸಿದ್ಧತೆಗಳ ಮೇಲುಸ್ತುವಾರಿಯಾಗಿ ಐಎಎಸ್ ಅಧಿಕಾರಿ ಡಾ.ರಜನೀಶ್ ಗೋಯಲ್ ಅವರನ್ನು ನೇಮಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತರಕನ್ ಅವರು ರಾಜ್ಯಪಾಲರ ಅನುಮತಿ ಮೇರೆಗೆ ಆದೇಶ ಹೊರಡಿಸಿದ್ದಾರೆ.
ವಿಶೇಷ ಅಧಿಕಾರಿಯಾಗಿ ಅನಿರುದ್ಧ್ ಶ್ರವಣ್ ನೇಮಕ:
ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿಯಾಗಿ ಅನಿರುದ್ಧ್ ಶ್ರವಣ್ ನೇಮಕ ಮಾಡಿ, ಆದೇಶ ಹೊರಡಿಸಲಾಗಿದೆ. ಈಗಾಗಲೇ ವಿಜಯನಗರ ಜಿಲ್ಲೆ ರಚನೆ ಮಾಡಲಾಗಿದೆ. ಸರ್ಕಾರಿ ಕಚೇರಿ ಕಾರ್ಯಾರಂಭ ಮಾಡಲು ಹುದ್ದೆಗಳ ವಿವರ ನಿಗದಿಪಡಿಸಿ, ಇದಕ್ಕೆ ಬೇಕಾಗಿರುವ ಕಟ್ಟಡ ಮತ್ತು ಸಾಮಗ್ರಿಗಳು ಹಾಗೂ ಎಲ್ಲಾ ಪೂರ್ವ ಸಿದ್ಧತೆಗಳನ್ನು ನೋಡಿಕೊಳ್ಳಲು ಬೆಂಗಳೂರಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಆಯುಕ್ತ (ಐಎಎಸ್) ಅನಿರುದ್ಧ ಶ್ರವಣ್ ಅವರನ್ನು ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತರಕನ್ ಆದೇಶ ಹೊರಡಿಸಿದ್ದಾರೆ.