ಬಳ್ಳಾರಿ: ಕರ್ನಾಟಕ - ಆಂಧ್ರಪ್ರದೇಶ ಗಡಿ ಭಾಗದ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ. ಇಂದಿನಿಂದ ಗಡಿ ಸರ್ವೇ ಕಾರ್ಯದ ಮರು ಪರಿಶೀಲನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಸ್ಪಷ್ಟನೆ ನೀಡಿದರು.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡ ಡಿಸಿ, ಸರ್ವೇ ಆಫ್ ಇಂಡಿಯಾದ ಅಧಿಕಾರಿ ವರ್ಗದಿಂದ ಸರ್ವೇ ಕಾರ್ಯ ಮುಕ್ತಾಯವಾಗಿದೆ. ಆದರೆ, ಸರ್ವೇ ಆಫ್ ಇಂಡಿಯಾ ಮಾಡಿದ ಈ ಗಡಿ ಸರ್ವೇ ಕಾರ್ಯದ ಮರು ಪರಿಶೀಲನೆ ಕಾರ್ಯವು ನಡೆಯಬೇಕಿದೆ. ಇಂದಿನಿಂದ ಸರ್ವೇ ಸೆಟಲ್ಮೆಂಟ್ ಕಮಿಷನರ್ ಕಚೇರಿಯಿಂದ ಜೆಡಿಎಲ್ಆರ್ ಹಾಗೂ ಡಿಡಿಎಲ್ಆರ್ ಅವರನ್ನು ಒಳಗೊಂಡ ಟೀಮ್ ಬಳ್ಳಾರಿಗೆ ಬಂದಿದೆ. ಸರ್ವೇ ಆಫ್ ಇಂಡಿಯಾದವರು ಗುರುತಿಸಿದ ಗುರುತುಗಳ ಮರು ಪರಿಶೀಲನೆ ಕಾರ್ಯ ನಡೆಯಲಿದೆ ಎಂದರು.
ಕರ್ನಾಟಕ - ಆಂಧ್ರಪ್ರದೇಶ ರಾಜ್ಯದ ಕಂದಾಯ, ಸರ್ವೇ ಹಾಗೂ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವರ್ಗದವರಿಂದ ಸೂಚಿತವಾಗಿರುವ ನಕಾಶೆಯಿಂದಲೇ ಈ ಗಡಿ ಸರ್ವೇ ಕಾರ್ಯ ನಡೆದಿದೆ. ಅಂದಾಜು 76 ಕಡೆಗಳಲ್ಲಿ ಗಡಿ ಗುರುತು ಫಿಕ್ಸ್ ಮಾಡಲಾಗಿದೆ. ಈಗಾಗಲೇ ಫಿಕ್ಸ್ ಮಾಡಿರುವ ಗಡಿ ಗುರುತುಗಳು ಸರಿಯಾಗಿವೆಯೇ ಎಂಬುದನ್ನು ಚೆಕ್ ಮಾಡಿ ಮುಂದಿನ ಎರಡ್ಮೂರು ದಿನಗಳಲ್ಲಿ ಗಡಿ ಸರ್ವೇ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.