ಬಳ್ಳಾರಿ : ನಗರದ ಕೌಲ್‌ಬಜಾರ್ ಪ್ರದೇಶದ ಟೇಲರ್ ಬೀದಿಯಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಕಿರಿಯ ಆರೋಗ್ಯ ಸಹಾಯಕಿಯರಿಗೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಂ ಗೋವಿಂದ್‌ರಾಜಲು ಅವರು ರೇಷ್ಮೆ ಸೀರೆ ಮತ್ತು ಆಹಾರದ ಕಿಟ್ ವಿತರಿಸಿದರು.
ಕೊರೊನಾ ವಾರಿಯರ್ಸ್ಗಳಾದ 106 ಕಿರಿಯ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್, ರೇಷ್ಮೆ ಸೀರೆ ಮತ್ತು ಆಹಾರದ ಕಿಟ್ಗಳನ್ನು ನೀಡಲಾಯಿತು.

ನಂತರ ಸಹಾಯಕ ಆಯುಕ್ತ ರಮೇಶ್ ಕೋನಾರೆಡ್ಡಿ ಮಾತನಾಡಿ, ಸನ್ಮಾನಗಳು ಇನ್ನೂ ಜವಾಬ್ದಾರಿಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ನಮ್ಮ ಪಾಡಿಗೆ ಒಳ್ಳೆಯ ಕೆಲಸ ಮಾಡುತ್ತಾ ಸಾಗೋಣ, ಅದು ಒಳ್ಳೆಯದನ್ನೇ ಮಾಡುತ್ತದೆ. ಸಮಾಜ ಗುರುತಿಸದಿದ್ದರೂ ಮಾಡಿದ ಕೆಲಸದ ತೃಪ್ತಿ ಇರುತ್ತದೆ ಎಂದರು.
ಜಿಲ್ಲಾ ವೈದ್ಯಾಧಿಕಾರಿ ಜರ್ನಾಧನ ಮಾತನಾಡಿ, ಲಾಕ್ಡೌನ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರ ಸೇವೆ ಶ್ಲಾಘನೀಯ ಎಂದರು.
ಎಂ ಗೋವಿಂದ್‌ರಾಜಲು ಅವರು ಮಾತನಾಡಿ, ಸಮಾಜ ಸೇವೆ ಮಾಡಲು ಸದಾ ಸಿದ್ಧನಾಗಿದ್ದೇನೆ. ಈವರೆಗೂ 41 ದಿನ ನಿತ್ಯ ಒಂದು ಸಾವಿರ ಜನರಿಗೆ ಉಚಿತ ಊಟ, 15 ಸಾವಿರ ಮಾಸ್ಕ್, 5,500 ಜನರಿಗೆ ರೇಷನ್ ಕಿಟ್ ನೀಡಿದ್ದೇವೆ. ಮುಂದೆಯೂ ನೀಡುತ್ತೇನೆ ಎಂದರು.