ಬಳ್ಳಾರಿ: ಹೊರ ರಾಜ್ಯಗಳ ಹಾಗೂ ರಾಜ್ಯದ ಕೆಂಪು ವಲಯಗಳಲ್ಲಿನ ತಾಲೂಕು ಮತ್ತು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಅಂದಾಜು 1,800 ಕೋಟಿ ರೂ.ಯಷ್ಟು ನಷ್ಟ ಉಂಟಾಗಿದೆ. ಸಂಸ್ಥೆಯ ನೌಕರರ ವೇತನಕ್ಕೂ ರಾಜ್ಯ ಸರ್ಕಾರವನ್ನು ಕೇಳುವ ಪರಿಸ್ಥಿತಿ ಬಂದಿದೆ ಎಂದರು.
ಕಳೆದ ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಂದಾಜು ಬಿಡುಗಡೆ ಮಾಡಿದ್ದ 342 ಕೋಟಿ ರೂ. ಅನುದಾನದಲ್ಲಿ ನೌಕರರ ಸಂಬಳ ನೀಡಲಾಗಿದೆ. ಮುಂದಿನ ಎರಡು- ಮೂರು ತಿಂಗಳವರೆಗೆ ಈ ಸಮಸ್ಯೆ ಮುಂದುವರಿಯಲಿದೆ. ಅನಗತ್ಯವಾಗಿ ನೇಮಿಸಿಕೊಂಡ ಸಿಬ್ಬಂದಿಯನ್ನು ಕೆಲಸದಿಂದ ಕೈಬಿಡುವಂತಹ ಪರಿಸ್ಥಿತಿಗೆ ಇಲಾಖೆ ಸಿಲುಕಿಕೊಂಡಿದೆ ಎಂದು ಹೇಳಿದರು.
ರಾಜ್ಯ ಹಾಗೂ ಅಂತರ್ ರಾಜ್ಯಗಳ ಕೆಂಪು ವಲಯಗಳನ್ನ ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್ಗಳ ಓಡಾಟ ಶುರುವಾಗಲಿದೆ. ಇದರಿಂದ ನಿತ್ಯ ಅಂದಾಜು 6 ಕೋಟಿ ರೂ.ಯಷ್ಟು ನಷ್ಟ ಸಂಸ್ಥೆಗೆ ಆಗಲಿದೆ. ಆದರೂ ಬಸ್ಗಳನ್ನು ಓಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.