ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಸಮಯಾನುಸಾರ ಊಟ-ತಿಂಡಿ ಹಾಗೂ ಸೂಕ್ತ ಚಿಕಿತ್ಸೆಯ ಕೊರತೆ ಇದೆ ಎಂಬ ಆರೋಪ ಕೇಳಿ ಬಂದಿದೆ.
ನಗರ ಹೊರವಲಯದ ಹೊಸಪೇಟೆ ರಸ್ತೆಯಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೋವಿಡ್ -19 ಕೇರ್ ಸೇಂಟರ್ನಲ್ಲಿರುವ ಸೋಂಕಿತರಿಗೆ ಪ್ರತಿದಿನ ಸರಿಯಾದ ಸಮಯಕ್ಕೆ ಚಿಕಿತ್ಸೆ, ಊಟ, ತಿಂಡಿ ಹಾಗೂ ನೀರು ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಅಲ್ಲದೇ, ಸ್ವಚ್ಛತೆಯ ಕೊರತೆ ಕೂಡ ಕಾಡುತ್ತಿದೆ. ಶೌಚಗೃಹ ಹಾಗೂ ಸ್ನಾನಗೃಹವೂ ಕೂಡ ಸ್ವಚ್ಛಗೊಳಿಸುತ್ತಿಲ್ಲ. ಇದರಿಂದ ಬೇರೆ ರೋಗಗಳು ಹರಡುವ ಭಯದಲ್ಲಿ ಸೋಂಕಿತರಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಆಕ್ಷೇಪ ವ್ಯಕ್ತಪಡಿಸಿದ್ರೂ ಕೂಡ ಇಲ್ಲಿನ ಅಧಿಕಾರಿಗಳು ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಕೇವಲ ಇಂದಿನ ಸಮಸ್ಯೆಯಲ್ಲ. ಕಳೆದ ಒಂದು ವಾರದಿಂದಲೂ ಇದೇ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸೋಂಕಿತರು ಮನವಿ ಮಾಡಿದ್ದಾರೆ.