ಬಳ್ಳಾರಿ: ಬಳ್ಳಾರಿಯಲ್ಲಿ ವರ್ಷಕ್ಕೆ ಒಂದು ಬಾಲ್ಯ ವಿವಾಹ ಪ್ರಕರಣ ದಾಖಲಾಗುತ್ತಿದೆ. ಬಾಲ್ಯವಿವಾಹ ಏರ್ಪಡುವ ಮುಂಚೆಯೇ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ನ್ಯಾಯಾಧೀಶ ಎಂ. ಖಾಸಿಂ ಚೂರಿಖಾನ್ ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ನ್ಯಾಯಾಧೀಶ ಎಂ. ಖಾಸಿಂ ಚೂರಿಖಾನ್, ಬಾಲ್ಯವಿವಾಹ ಮಾಡಿದರೆ ಶಿಕ್ಷೆ, ದಂಡ ಹಾಕುತ್ತಾರೆ ಎನ್ನುವ ಮಾಹಿತಿ ಜನರಲ್ಲಿಲ್ಲ. ಸಂಶೋಧನೆಯೊಂದರ ಪ್ರಕಾರ ದೇಶದಲ್ಲಿ ಪ್ರತಿ 20 ಮದುವೆಗಳಲ್ಲಿ 5 ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ರು.
ಬಾಲ್ಯವಿವಾಹ ಸಾಮಾಜಿಕ ಪಿಡುಗು. ಅದನ್ನು ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್, ನ್ಯಾಯಾಂಗ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ತಿಳಿಸಿದ್ರು.