ಬಳ್ಳಾರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯ ಬ್ಯಾಂಕ್ ನೌಕರರು ಇಂದು ಮುಷ್ಕರ ನಡೆಸಿದರು.
ನಗರದ ರೈಲು ನಿಲ್ದಾಣ ಎದುರಿರುವ ಎಸ್ಬಿಐ ಬ್ಯಾಂಕ್ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೌಕರರು ಮೋತಿ ವೃತ್ತ, ಜಿಲ್ಲಾಧಿಕಾರಿ ಕಚೇರಿಯ ಮಾರ್ಗವಾಗಿ ಗಡಿಗಿ ಚನ್ನಪ್ಪ ವೃತ್ತದವರೆಗೆ ಪ್ರತಿಭಟನೆ ನಡೆಸಿ ಬಳಿಕ ಎಸ್ ಬಿಐ ಬ್ಯಾಂಕಿನ ಬಳಿ ತೆರಳಿದರು. ಈ ವೇಳೆ ತಮ್ಮ ಮೂಲ ವೇತನ ಪರಿಷ್ಕರಿಸಬೇಕು, ಐದು ದಿನಗಳ ಅವಧಿಗೆ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಬೇಕು. ಮೂಲ ವೇತನದೊಂದಿಗೆ ವಿಶೇಷ ಭತ್ಯೆಯನ್ನು ವಿಲೀನಗೊಳಿಸಬೇಕು. ಎನ್ಪಿಎಸ್ ಪಿಂಚಣಿ ಯೋಜನೆಯನ್ನು ಸ್ಥಗಿತಗೊಳಿಸಿ ಒಪಿಎಸ್ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಹಾಗೂ ಕುಟುಂಬ ಪಿಂಚಣಿ ಯೋಜನೆಯಲ್ಲಿ ಸುಧಾರಣೆ ತರಬೇಕೆಂಬುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.
ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಸಂಚಾಲಕ ರಾಮಕೃಷ್ಣ, ನೌಕರರಾದ ದಾಮೋದರ, ಮಹೇಂದ್ರ ಸೇರಿದಂತೆ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.