ಬೆಳಗಾವಿ: ಬೆಳಗಾವಿಯಲ್ಲಿಯೂ ಸಹ ನಿಮಗೆ ಬೇರೆ ದೇಶದ ನೋಟುಗಳು, ಶಸ್ತ್ರಾಸ್ತ್ರಗಳು ಸಿಗುತ್ತವೆ ಎಂದು ಶಾಸಕ ಅಭಯ್ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ಪಾಕಿಸ್ತಾನ ನೋಟು ಪತ್ತೆಯಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ, ಕುಂದಾನಗರಿಯ ಕೆಲ ಏರಿಯಾಗಳಲ್ಲಿ ಪರಿಶೀಲಿಸಿದರೆ ನಿಮಗೆ ಬೇರೆ ದೇಶದ ನೋಟುಗಳು, ಶಸ್ತ್ರಾಸ್ತ್ರಗಳು ಸಿಗುತ್ತವೆ ಎಂದು ಗಂಭೀರ ಆರೋಪ ಮಾಡಿದ್ರು.
ನಗರದಲ್ಲಿ ಪೊಲೀಸ್ ಇಲಾಖೆ ಇನ್ನೂ ಅಷ್ಟೊಂದು ಕಾರ್ಯರೂಪಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಯಾಗಿ ದಾರಿಗೆ ತರುವಂತಹದ್ದನ್ನು ಇಲಾಖೆ ಮಾಡಬೇಕಾಗುತ್ತದೆ. ಬೆಳಗಾವಿಯ ಕೆಲ ಏರಿಯಾಗಳಿಗೆ ಪೊಲೀಸರು ಹೋಗುವುದಿಲ್ಲ. ಹೋಗಿ ಎಲ್ಲೆಡೆ ಪರಿಶೀಲಿಸಿ ಅಂತ ಪೊಲೀಸ್ ಇಲಾಖೆಗೆ ವಿನಂತಿ ಮಾಡುತ್ತೇನೆ. ನಗರದಲ್ಲಿ ಎಷ್ಟು ತಲ್ವಾರ್‌ಗಳು ಅಕ್ರಮವಾಗಿ ಬಂದಿವೆ. ಯಾವುದೇ ಗಲಾಟೆ ಆದರೆ ಅಲ್ಲಿ ಯಾರ ಕೈಯಲ್ಲಿ ತಲ್ವಾರ್ ಇರುತ್ತೆ ಅನ್ನೋದು ಪೊಲೀಸರಿಗೆ ಗೊತ್ತಿಲ್ಲವಾ? ಎಂದು ಶಾಸಕರು ಪ್ರಶ್ನಿಸಿದರು.
ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಪಾಕಿಸ್ತಾನದ ನೋಟು ಪತ್ತೆ; ತನಿಖೆ ಆರಂಭಿಸಿದ ಪೊಲೀಸರು
ನಾನು ಪ್ರಶ್ನೆ ಎತ್ತಿದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿದ್ರು. ಮಟ್ಕಾ ಆಡೋರು, ಜೂಜುಕೋರರು, ಗಾಂಜಾ ಮಾರೋರು ಬೆಳಗಾವಿ ಬಿಟ್ಟು ಹೋಗಿದ್ದಾರೆ. ಇನ್ನೂ ಕೆಲವರು ಯಾರು ಉಳಿದಿದ್ದಾರೋ ಅವರ ವಿರುದ್ಧ ಕ್ರಮ ಆಗಬೇಕು ಎಂದು ಶಾಸಕ ಅಭಯ್ ಪಾಟೀಲ್ ಒತ್ತಾಯಿಸಿದರು.
ವಿಷಯ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ 10 ರೂಪಾಯಿ ಮುಖ ಬೆಲೆಯ ಒಂದು ನೋಟು ಪತ್ತೆಯಾಗಿತ್ತು. ಈ ಬಗ್ಗೆ ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಂವಿಧಾನ ಪಾಲನೆ ಮಾಡದವರಿಗೆ ದೇಶದಲ್ಲಿರುವ ಹಕ್ಕಿಲ್ಲ: ಭಾರತ ದೇಶದ ಸಂವಿಧಾನ ಪಾಲನೆ ಮಾಡದವರಿಗೆ ಈ ದೇಶದಲ್ಲಿರುವ ಹಕ್ಕು ಇಲ್ಲ ಎಂದು ಶಾಸಕ ಅಭಯ್ ಪಾಟೀಲ ಹೇಳಿದರು. ನಮ್ಮ ದೇಶದಲ್ಲಿ ಇರಬೇಕು ಅಂದರೆ ಸಂವಿಧಾನ ಪಾಲನೆ ಮಾಡಬೇಕು. ಆದ್ರೆ ಸಂವಿಧಾನ ಪಾಲನೆ ಮಾಡಲ್ಲ ಅನ್ನೋರು ಬೇರೆ ದೇಶಕ್ಕೆ ಹೋಗಬೇಕು. ಯಾವ ದೇಶದ ಸಂವಿಧಾನ ಪಾಲನೆ ಮಾಡುತ್ತಾರೋ ಆ ದೇಶಕ್ಕೆ ಹೋಗಲಿ ಎಂದು ಖಡಕ್ ಆಗಿ ಹೇಳಿದ್ರು.
ನ್ಯಾಯಾಲಯಕ್ಕೆ ಅಗೌರವ: ಹಿಜಾಬ್ ವಿಚಾರವಾಗಿ ಕೋರ್ಟ್ ಆದೇಶದ ವಿರುದ್ಧ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಸಂದೇಶ ಇಷ್ಟೇ-ನಾವು ಈ ದೇಶದಲ್ಲಿ ಇರಲು ಅರ್ಹರಲ್ಲ ಎಂಬುದು. ಯಾವ ಇಲಾಖೆಯಿಂದ ಯಾವ ನಿರ್ಣಯ ಆಗಿದೆ ಅಂತಾ ನನಗಂತೂ ಗೊತ್ತಿಲ್ಲ. ನ್ಯಾಯಾಲಯದ ನಿರ್ಣಯ ಒಪ್ಪದೇ ನಾವು ಹಿಜಾಬ್ ಹಾಕಿಕೊಂಡು ಬರುತ್ತೇವೆ ಅಂತಿದ್ದಾರೆ. ಇದು ಕೋರ್ಟ್ಗೆ ಅಪಮಾನ ಅಲ್ಲದೇ ಮತ್ತೇನು? ನ್ಯಾಯಾಲಯದ ಆದೇಶ ಪಾಲನೆ ಮತ್ತು ಜವಾಬ್ದಾರಿ ಭಾರತದಲ್ಲಿರುವ ಎಲ್ಲರ ಮೇಲಿದೆ. ಅದನ್ನು ಕಾಪಾಡುವಂಥದ್ದನ್ನು ಮೊದಲು ಮಾಡಬೇಕು ಎಂದರು.
ಹಿಂದೂಯೇತರ ವರ್ತಕರಿಗೆ ಆರ್ಥಿಕ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್ಥಿಕ ನಿರ್ಬಂಧ ಯಾಕೆ ಹಾಕುತ್ತಿದ್ದಾರೆಂಬುದನ್ನು ಅವಲೋಕನ ಮಾಡಬೇಕು. ಪ್ರತಿರೋಧ ಯಾವಾಗ ಆಗುತ್ತದೆ ಅನ್ನೋದರ ಬಗ್ಗೆ ಚಿಂತನೆ ಆಗಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಷಡ್ಯಂತ್ರ: ಮಂಡ್ಯದ ಮುಸ್ಕಾನ್ ಬೆಂಬಲಿಸಿ ಅಲ್‌ಖೈದಾ ಮುಖ್ಯಸ್ಥನ ವಿಡಿಯೋ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ವಿಡಿಯೋ ಬಿಡುಗಡೆ ವಿಚಾರದಲ್ಲಿ ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ. ಈ ಘಟನೆ ಬಗ್ಗೆ ಅಲ್‌ಖೈದಾ ಮುಖ್ಯಸ್ಥ ಹೇಳುತ್ತಾನಂದ್ರೆ ನೆಟ್ವರ್ಕ್ ಎಷ್ಟಿರಬಹುದೆಂದು ಲೆಕ್ಕ ಹಾಕಿ. ಇದರ ಹಿಂದೆ ಏನು ಷಡ್ಯಂತ್ರ ಇದೆ ಅನ್ನೋದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನ್ಯಾಯಾಲಯ ನಿರ್ಣಯ ಬಂದ ಮೇಲೂ ಹಿಜಾಬ್ ಹಾಕಿಕೊಂಡು ಹೋಗುತ್ತೇವೆ ಅನ್ನೋ ಹೆಣ್ಣು ಮಕ್ಕಳು ಸಮಾಜದ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ದೇಶಕ್ಕೆ ಒಳ್ಳೆಯದಾಗುವ ವಾತಾವರಣ ಇಲ್ಲ ಎಂದರು.
ಅಲ್‌ಖೈದಾ ಮುಖ್ಯಸ್ಥನ ವಿಡಿಯೋ ಆರ್‌ಎಸ್ಎಸ್ ಸೃಷ್ಟಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದವರು. ಮೊದಲನೇ ಬಾರಿ ಶಾಸಕನಾದವನು ಸಹ ಈ ರೀತಿ ಮಾತನಾಡಲ್ಲ. ನೀವೇ ತಿಳಿದುಕೊಂಡು ಬಿಡಿ, ಅವರ ಮಟ್ಟ ಎಲ್ಲಿದೆ ಅಂತ ಎಂದು ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಅಭಯ್ ಪಾಟೀಲ್ ವ್ಯಂಗ್ಯವಾಡಿದರು.
ಆರ್‌ಎಸ್ಎಸ್ ಬಗ್ಗೆ ಒಂದ್ ಪರ್ಸೆಂಟೂ ಕೂಡ ಕುಮಾರಸ್ವಾಮಿಗೆ ಗೊತ್ತಿಲ್ಲ. ಒಂದು ಪರ್ಸೆಂಟ್ ಗೊತ್ತಿದ್ದರೂ ಅವರು ಈ ರೀತಿ ಟೀಕೆ ಮಾಡ್ತಿರಲಿಲ್ಲ. ಹಾನಗಲ್, ಸಿಂದಗಿ ಚುನಾವಣೆಯಲ್ಲಿ ಯಾವ ಸಮಾಜದವರನ್ನು ಪ್ಲೀಸ್ ಮಾಡಲು ಹೊರಟಿದ್ರೋ ಅವರೇ ಪಾತಾಳಕ್ಕಿಂತ ಮುಂದಿನ ಸ್ಥಳವನ್ನ ತೋರಿಸಿದ್ದಾರೆ ಎಂದು ಟೀಕಿಸಿದರು.
ಅವರೇನೂ ಹೇಳಲಿಲ್ಲ, ನಾವೇನೂ ಕೇಳಲಿಲ್ಲ: ಸಿಎಂ ಬೊಮ್ಮಾಯಿ ಅವರು ದೆಹಲಿಯಿಂದ ವಾಪಸ್ ಬಂದ ಬಳಿಕ ನಾನೇ ಮೊದಲು ಭೇಟಿ ಆಗಿದ್ದೆ. ಆಗ ಕೆಲವೊಂದಿಷ್ಟು ಶಾಸಕರು ಸಹ ಇದ್ದರು. ನಾವು ಅವರಿಗೆ ಸಂಪುಟ ವಿಸ್ತರಣೆ ಬಗ್ಗೆ ಕೇಳೋದಕ್ಕೆ ಹೋಗಲಿಲ್ಲ, ಅವರೂ ಏನೂ ಹೇಳಲಿಲ್ಲ. ಸಂಪುಟ ವಿಸ್ತರಣೆ ಹೇಳಿ ಕೇಳಿ ಏನೂ ಆಗುವುದಿಲ್ಲ. ಅದರ ನಿರ್ಣಯವನ್ನು ವರಿಷ್ಠರು ಮಾಡ್ತಾರೆ. ಈಗ ಯಾರು ಮಾಡ್ತಾರೆ ಅವರನ್ನು ಕೇಳಬೇಕು. ಸಂಪುಟ ವಿಸ್ತರಣೆ ಆಗುತ್ತೋ ಇಲ್ಲವೋ ಅನ್ನೋದನ್ನು ಹೇಳಬೇಕು. 2006ರಿಂದಲೂ ನನ್ನ ಹೆಸರು ಮಾಧ್ಯಮಗಳಲ್ಲಿ ಬರುತ್ತಿದೆ. ಆದ್ರೆ ನಾನು ಎಂದೂ ಸಚಿವ ಸ್ಥಾನದ ನಿರೀಕ್ಷೆಯನ್ನೇ ಮಾಡಿಲ್ಲ ಎಂದು ಅಭಯ್ ಪಾಟೀಲ್ ಸ್ಪಷ್ಟಪಡಿಸಿದರು.