ಅಥಣಿ: ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ನಗರದ ಶ್ರೀ ಕೆ. ಎ. ಲೋಕಾಪೂರ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.
ಸದಾ ಪಾಶ್ಚಿಮಾತ್ಯ ಉಡುಗೆ ತೊಟ್ಟು ಕಾಲೇಜಿಗೆ ಬರುತ್ತಿದ್ದ ನಾರಿಯರು ಇಳಕಲ್ ಸೀರೆ ತೊಟ್ಟು ಮಲ್ಲಿಗೆ ಮುಡಿದು, ಕುಂಕುಮ ಬೊಟ್ಟಿಟ್ಟು ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿ ಸಿಂಗರಿಸಿಕೊಂಡು ಮಹಿಳಾ ದಿನಾಚರಣೆ ಆಚರಿಸಿ ಸಂಭ್ರಮಿಸಿದರು. ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಕಾಣೆಯಾಗಿದ್ದ ನಾಡಿನ ಸಂಸ್ಕೃತಿಯ ಉಡುಪು ಧರಿಸಿದ್ದ ವಿದ್ಯಾರ್ಥಿನಿಯರು ಎಲ್ಲರ ಗಮನ ಸೆಳೆದರು.