ಬೆಳಗಾವಿ: ಬೆಳಗಾವಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಮುಂದುವರಿದೆ. ಘಟಪ್ರಭಾ ಹಾಗೂ ರಕ್ಕಸಕೊಪ್ಪ ಜಲಾಶಯಗಳಲ್ಲಿ ನೀರಿನ ಸಂಗ್ರಹವಿದ್ದರೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಖಾಲಿ ಕೊಡಗಳ ಸಮೇತವಾಗಿ ರಸ್ತೆ ತಡೆದು ಧರಣಿ ನಡೆಸಿದರು.
ಇಲ್ಲಿನ ಬಾಕ್ಸೈಟ್ ರಸ್ತೆಯಲ್ಲಿ ಖಾಲಿ ಕೊಡಗಳನ್ನು ಹಿಡಿದು ಸ್ಥಳೀಯರು ಪ್ರತಿಭಟನೆ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಭೇಟಿ ನೀಡಿದರು. ಆದರೆ, ಶಾಸಕರ ವಿರುದ್ಧ ಕೂಡ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಬೇಕೇ-ಬೇಕು ನೀರು ಬೇಕೆಂದು ಮಹಿಳೆಯರು ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟರು.
ಕಳಪೆ ನಿರ್ವಹಣೆ: ವಿಶ್ವಬ್ಯಾಂಕ್ ಅನುದಾನದಲ್ಲಿ ನಿರಂತರ ಕುಡಿಯುವ ನೀರು ಯೋಜನೆಯನ್ನು ನಗರದಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ. ಇದರ ಗುತ್ತಿಗೆಯನ್ನು ಎಲ್ ಅಂಡ್ ಟಿ ಕಂಪನಿ ಪಡೆದಿದೆ. ಆದರೂ, ಖಾಸಗಿಯವರೂ ಕಳಪೆ ನಿರ್ವಹಣೆ ಮಾಡುತ್ತಿದ್ದಾರೆ. ಜಲಾಶಯಗಳಲ್ಲಿ ನೀರು ಸಂಗ್ರಹ ಇದ್ದರೂ ಸಮರ್ಪಕ ನೀರು ಪೂರೈಕೆ ಮಾಡದ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಕಳಪ ನಿರ್ವಹಣೆಯಿಂದಲೇ ಜನರು ಹನಿ ನೀರಿಗಾಗಿಯೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರು ಸಂಗ್ರಹದ ಘಟಕಗಳಲ್ಲಿನ ಪಂಪ್ ಸೆಟ್‌ಗಳು ದುರಸ್ತಿಗೆ ಬಂದಿವೆ. ತಕ್ಷಣವೇ ರಿಪೇರಿ ಕೆಲಸ ಮಾಡಿಸಬೇಕಿದ್ದ ಎಲ್ ಅಂಡ್ ಟಿ ಕಂಪನಿ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ ಎಂದು ತಮ್ಮ ಸಿಟ್ಟು ವ್ಯಕ್ತಪಡಿಸಿದರು.
ಸಭೆ ನಡೆಸಿದರೂ ಪ್ರಯೋಜನವಿಲ್ಲ: ಸಮರ್ಪಕ ನೀರು ಪೂರೈಕೆ ಸಂಬಂಧ ಕಂಪನಿಯ ಸಿಬ್ಬಂದಿ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಶಾಸಕ ಬೆನಕೆ ಮೂರ್ನಾಲ್ಕು ದಿನಗಳ ಹಿಂದೆಯೇ ಸಭೆ ನಡೆಸಿದ್ದರು. ನೀರಿನ ಸಮಸ್ಯೆ ಬಗೆಹರಿಸುವಂತೆ ತಾಕೀತು ಸಹ ಮಾಡಿದ್ದರು. ಆದರೂ, ಸಮಸ್ಯೆ ಬಗೆ ಹರಿಯದ ಕಾರಣ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.