ಬೆಳಗಾವಿ: ದಿ.ಸುರೇಶ ಅಂಗಡಿ ಅವರ ಜನ್ಮದಿನದ ನಿಮಿತ್ತ ಪೃಥ್ವಿ ಸಿಂಗ್ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡ ಫುಡ್ ಕಿಟ್ ಹಾಗೂ ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಂಸದೆ ಮಂಗಳ ಅಂಗಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಂಸದೆ ಅಂಗಡಿ, ಲಾಕ್ಡೌನ್ ನಿಂದ ತೊಂದರೆಗೆ ಸಿಲುಕಿರುವ ಜನರಿಗೆ ಪತಿ ಸುರೇಶ್ ಅಂಗಡಿ ಅವರ ಜನ್ಮದಿನದ ನಿಮಿತ್ತ ಜಿಲ್ಲೆಯಲ್ಲಿ ಫುಡ್ ಕಿಟ್ ಹಾಗೂ ಕೋವಿಡ್ ಕಿಟ್ ಗಳನ್ನು ವಿತರಣೆ ಮಾಡುವ ಮೂಲಕ ಕೊರೊನಾ ಸಂದರ್ಭದಲ್ಲಿ ಸಾಧ್ಯವಾದಷ್ಟು ಜನರಿಗೆ ನಮ್ಮಿಂದ ಸಹಾಯ ಮಾಡುತ್ತಿದ್ದೇವೆ. ಇದಲ್ಲದೇ ಕೋವಿಡ್ ಸಂದರ್ಭದಲ್ಲಿ ಲಾಕ್ಡೌನ್ ಆದಾಗಿನಿಂದ ಪೃಥ್ವಿ ಸಿಂಗ್ ಫೌಂಡೇಶನ್ ಕೂಡ ಜನರ ನೆರವಿಗೆ ಧಾವಿಸುತ್ತಿದ್ದು, ಅವರ ಕಾರ್ಯಕ್ಕೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಜೂ.7ರ ನಂತರವೂ ಲಾಕ್ಡೌನ್ ಮುಂದುವರಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಜಿಲ್ಲೆಯಲ್ಲಿ ಕೊರೊನಾ ಹತೋಟಿಗೆ ಬಂದಿದೆ. ಆದ್ರೆ ,ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸ್ವತಃ ಮುಖ್ಯಮಂತ್ರಿಗಳು ಸಭೆ ಕರೆದು ಲಾಕ್ಡೌನ್ ಮುಂದುವರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಆದ್ರೆ, ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗಿರುವುದರಿಂದ ಇನ್ನೂ ಒಂದು ವಾರಗಳ ಕಾಲ ಲಾಕ್ಡೌನ್ ಅವಧಿಯನ್ನು ವಿಸ್ತರಣೆ ಮಾಡಿದ್ರೆ ಒಳ್ಳೆಯದು ಎಂದು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದಾರೆ.