ಚಿಕ್ಕೋಡಿ (ಬೆಳಗಾವಿ) : ಸಚಿವ ಶ್ರೀಮಂತ ಪಾಟೀಲ ತಮ್ಮ ಕ್ಷೇತ್ರದ ಜನರಿಗೆ ಅನುಕೂಲವಾಗಲೆಂದು ಕಾಗವಾಡ ತಾಲೂಕಿನ ಐನಾಪೂರ ಯಾತ ನೀರಾವರಿ ಯೋಜನೆ ಮೂಲಕ ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆದರೆ, ಅಧಿಕಾರಿಗಳು ಉಪಕಾಲುವೆಗಳಿಗೆ ನೀರು ಹರಿಸದೇ ನಿರ್ಲಕ್ಷ್ಯ ತೋರಿದ್ದರಿಂದ ರೈತರ ಬೆಳೆಗಳು ಒಣಗುತ್ತಿವೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕವಲಗುಡ್ಡ ಹಾಗೂ ಸಿದ್ದೇವಾಡಿ ಗ್ರಾಮಗಳ ಉಪಕಾಲುವೆಗಳಿಗೆ ಈವರೆಗೂ ಒಂದು ಹನಿ ನೀರು ಕೂಡ ಬಂದಿಲ್ಲ. ಹೀಗಾಗಿ, ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ನೀರಿಲ್ಲದೇ ಒಣಗುತ್ತಿವೆ. ಐನಾಪೂರ ಏತ ನೀರಾವರಿ ಯೋಜನೆ ಪ್ರಾರಂಭವಾಗಿ ವರ್ಷಗಳೇ ಕಳೆದರೂ, ಈ ಭಾಗದ ರೈತರಿಗೆ ಯಾವುದೇ ಪ್ರಯೋಜನವಾಗಿರಲಿಲ್ಲ.
ಆದರೆ, ಕಳೆದೆರಡು ತಿಂಗಳ ಹಿಂದಿನಿಂದ ಈ ಭಾಗದ ರೈತರಿಗೆ ಅನೂಕೂಲವಾಗಲಿ ಎಂದು ಕಾಲುವೆಗೆ ನೀರು ಹರಿ ಬಿಡಲಾಗುತ್ತಿದೆ. ಆದರೆ, ಹೀಗೆ ಬಿಡಲಾಗುತ್ತಿರುವ ನೀರು ಎಲ್ಲೆಲ್ಲಿ ತಲುಪುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ.
ಕಾಗವಾಡ ತಾಲೂಕಿನ ಕವಲಗುಡ್ಡ ಗ್ರಾಮದ ಉಪ ಕಾಲುವೆಗಳಿಗೆ ನೀರು ಬಂದಿಲ್ಲ ಎಂದು ಅಧಿಕಾರಿಗಳನ್ನು ಕೇಳಿದ್ರೆ, ಕಚೇರಿಯಲ್ಲಿ ಕುಳಿತು ಅಲ್ಲಿನ ಕೆರೆಗಳಿಗೆ ನೀರು ಬಿಟ್ಟಿದ್ದೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ರೈತರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಫೋಟೋ ಜಾಡು ಹಿಡಿದು ಮಾಜಿ ಪ್ರೇಯಸಿ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಹೆಡೆಮುರಿ ಕಟ್ಟಿದ ಗೋಕರ್ಣ ಪೊಲೀಸ್