ಬೆಳಗಾವಿ : ರಾಜ್ಯದಲ್ಲಿ ಅಶಾಂತಿ ಮೂಡಿಸಲು ಸರ್ಕಾರದಿಂದ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುವರ್ಣವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದರಿಂದ ಎಲ್ಲರಿಗೂ ಕಸಿವಿಸಿ ಆಗ್ತಿದೆ. ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಮಾಡ್ತಿದ್ದಾರೆ.
ಹೀಗಾಗಿ, ಈ ಕಾನೂನು ಮಾಡೋದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಈ ಕಾಯಿದೆಯಿಂದ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ. ಎಲ್ಲಿಯೂ ಬಲವಂತವಾಗಿ ಮತಾಂತರ ಆಗಿಲ್ಲ. ಖಡಾಖಂಡಿತವಾಗಿಯೂ ಇದನ್ನು ವಿರೋಧ ಮಾಡ್ತೇವೆ ಎಂದು ಹೇಳಿದರು.
ನಾವು ಮೊದಲಿನಿಂದಲೂ ಇದನ್ನ ವಿರೋಧ ಮಾಡುತ್ತಿದ್ದೇವೆ. ಸಂವಿಧಾನದ ವಿರುದ್ಧವಾಗಿ ಇದನ್ನ ತೆಗೆದುಕೊಳ್ಳಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸಲು. ರಾಜಕೀಯವಾಗಿ ಕೆಲ ವಿಷಯಗಳನ್ನ ವಿಷಯಾಂತರ ಮಾಡಲು, ಅಂಬೇಡ್ಕರ್ ಅವರು ಮಾಡಿದ ಸಂವಿಧಾನಕ್ಕೂ ಈ ತೀರ್ಮಾನ ಅನ್ವಯಿಸಲ್ಲ ಎಂದಿದ್ದಾರೆ.
ನನಗೆ ಯಾವತ್ತು ಅವರ ಧರ್ಮದ ಬಗ್ಗೆ ಬೋಧಿಸಿಲ್ಲ : ಬೌದ್ಧ ಧರ್ಮ ಸೇರಿದ್ದ ಬೇರೆಯವರು ಬಂದು ಹರೇ ರಾಮ ಹರೇ ಕೃಷ್ಣಾ ಅಂತಾ ಭಜನೆ ಮಾಡ್ತಾರೆ. ಇದೊಂದು ಸೆಕ್ಯೂಲರ್ ರಾಜ್ಯ. ಶಾಂತಿ ಭೂಮಿ, ಶಾಂತಿಯ ತೋಟ ಕರ್ನಾಟಕದ ಬಗ್ಗೆ ಅಪಾರವಾದ ಪ್ರೀತಿ ಇದೆ. ಶಾಂತಿ ಕೆಡಸಲು ಇದೊಂದು ಪ್ರಯತ್ನ ಆಗಿದೆ.
ಮೊಘಲರು, ಪರ್ಶಿಯನ್ನರು ಬಂದು ಆಳಿದ್ರು. ಎಲ್ಲರಿಗೂ ಸೆಂಟ್ ಜೋಸೆಫ್, ಸೆಂಟ್ ಮಾರ್ಥಸ್, ಕ್ರೈಸ್ತ ಬೇಕು. ಎಲ್ಲರ ಮಕ್ಕಳಿಗೂ ಕಾನ್ವೆಂಟ್ ಬೇಕು. ನಾನು ನಮ್ಮ ಹಳ್ಳಿಯಲ್ಲಿ ಕ್ರೈಸ್ಟ್ ಸ್ಕೂಲ್‌ನಲ್ಲಿ ಓದಿದೆ. ನನಗೆ ಯಾವತ್ತು ಅವರ ಧರ್ಮದ ಬಗ್ಗೆ ಬೋಧಿಸಿಲ್ಲ. ಎಲ್ಲಾದರೂ ಅವರು ಬಲವಂತ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಸುಮ್ಮನೆ ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಆಗ್ತಿದೆ. ಅವರು ಸೇವೆ ಕೊಡ್ತಿದ್ದಾರೆ. ಹೂಡಿಕೆ ಮಾಡುವವರು ಕೂಡ ಬರಲ್ಲ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಮದುವೆ ಮೂಲಕ ಮತಾಂತರ ಆರೋಪ ವಿಚಾರ ಲವ್ ಕಥೆಯ ಉದಾಹರಣೆ ಕೊಟ್ಟ ಡಿಕೆಶಿ, ನೀನು ಲವ್ ಮಾಡಿದ್ದಕ್ಕೆ ನಾನು ಹೊಣೆನಾ? ನಿನ್ನ ಹಾರ್ಟ್ ಬೇರೆಯವರ ಹಾರ್ಟ್ ಒಂದಾದರೆ ಅದು ಲವ್ ಜಿಹಾದಾ..? ಅಕ್ಕಿ ಒಂದು ಕಡೆ ಇರುತ್ತೆ, ಅರಿಶಿನ ಒಂದು ಕಡೆ ಇರುತ್ತೆ. ಎರಡು ಸೇರಿದ್ರೆ ಮಂತ್ರಾಕ್ಷತೆ ಆಗುತ್ತದೆ ಅದಕ್ಕೆ ಏನು ಮಾಡೋಕೆ ಆಗುತ್ತೆ ಎಂದರು.
ಕಾಂಗ್ರೆಸ್ ಡಬಲ್ ಸ್ಟಾಂಡ್ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿಕೆಶಿ, ಕುಮಾರಸ್ವಾಮಿಯವರು ಬಹಳ ಬುದ್ದಿವಂತರು, ಪ್ರಜ್ಞಾವಂತರು ಇದ್ದಾರೆ. ಅವ್ರ ಬಗ್ಗೆ ನಮಗೆ ಮಾತಾಡಲು ಶಕ್ತಿ ಇಲ್ಲ. ಅವ್ರು ಬಹಳ ದೊಡ್ಡವರು, ಯಾರೋ ಸಣ್ಣಪುಟ್ಟದವರು ಆದರೆ ಮಾತಾಡಬಹುದು. ದೊಡ್ಡವರ ಸುದ್ದಿ ಯಾಕೆ ಬೇಕು ನಮಗೆ. ಅವರ ಬಳಿ ಕೆಲಸ ಮಾಡಿದ್ದೀನಿ ಅಂತಾ ಅವರಿಗೆ ಬೈಯ್ಯೋಕೆ ಆಗುತ್ತಾ ಎಂದರು.
ಸಿ ಟಿ ರವಿ ಅಲ್ಲ ಪಟಾಕಿ ರವಿ : ಮತ್ತೆ ಸಿ.ಟಿ. ರವಿ ಕಾಲೆಳೆದ ಡಿಕೆ ಶಿವಕುಮಾರ್, ಅವನ್ಯಾರು ಪಟಾಕಿ ರವೀನಾ ಎಂತವ್ನು. ಆ ಪಟಾಕಿ ರವಿ. ಏನೋ ಒಂದ್ ಪಟಾಕಿ ಹಚ್ ಬಿಡದು, ಬಿಟ್ ಬಿಡದು. ಆ ಪಟಾಕಿ ರವಿಗೂ ನಂಗೂ ಸಂಬಂಧನೇ ಇಲ್ಲ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ಮಾಡಿದ ಉದ್ದೇಶ ಉ.ಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕು ಎಂದು. ಆದರೆ, ಕಲ್ಯಾಣ ಕರ್ನಾಟಕ ಬಗ್ಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಕಲ್ಯಾಣ ಕರ್ನಾಟಕ ಬಗ್ಗೆ ಮಲತಾಯಿ ಧೋರಣೆ, ಘನಘೋರ ಅನ್ಯಾಯ ಮಾಡ್ತಿದೆ.
ಕಳೆದ ಅಧಿವೇಶನದಲ್ಲಿ ಹತ್ತು ದಿನಗಳ ಒಳಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾಡುತ್ತೇವೆ ಎಂದು ಸಿಎಂ ಮಾತು ಕೊಟ್ಟಿದ್ದರು. ಆದರೆ, ಮೂರು ತಿಂಗಳು ಆದರೂ ಮಂಡಳಿ ರಚನೆ ಆಗಿಲ್ಲ, ಸಭೆಯೂ ನಡೆದಿಲ್ಲ ಎಂದರು. ಬಜೆಟ್‌ನಲ್ಲಿ 1,500 ಕೋಟಿ ರೂ. ಇಡಲಾಗಿದೆ. 125 ಕೋಟಿ ಅಷ್ಟೇ ಖರ್ಚಾಗಿದೆ.
ಖಾಲಿ ಹುದ್ದೆ ಭರ್ತಿ ಆಗಿಲ್ಲ, ವಿವಿಯಲ್ಲಿ ಶೇ.80ರಷ್ಟು ಹುದ್ದೆ ಖಾಲಿ ಇದೆ. ಕಲ್ಯಾಣ ಕರ್ನಾಟಕವನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡ್ತಾರೆ. ನಾನು ಬೇರೆನೇ ಆಗಬೇಕು ಎಂಬ ರೀತಿಯಲ್ಲಿ ಅದಕ್ಕೆ ಪುಷ್ಟಿ ಕೊಡುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಹೋರಾಟ ಮಾಡುತ್ತೇವೆ. ಅನವಶ್ಯಕ ಕಾಯ್ದೆ ತಂದು ವೈಫಲ್ಯ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ. ಜನರ ದಾರಿ ತಪ್ಪಿಸುವ ಯತ್ನ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಜ.9 ರಿಂದ 19ರವರೆಗೆ ಪಾದಯಾತ್ರೆ.. ಡಿಕೆಶಿ ಘೋಷಣೆ