ಬೆಳಗಾವಿ: ಕೊರೊನಾ ಮಹಾಮಾರಿ ಸಾರಿಗೆ ವಲಯದ ಮೇಲೆ ಬೀರಿರುವ ಪರಿಣಾಮ ಅಷ್ಟಿಷ್ಟಲ್ಲ. ಅನ್ಲಾಕ್ ನಂತರ ಸ್ವಲ್ಪ ಮಟ್ಟಿಗೆ ಆರಂಭವಾದ ಸರ್ಕಾರಿ ಹಾಗೂ ಖಾಸಗಿ ವಿಮಾನಯಾನ ಸೇವೆಗಳು ಇನ್ನೂ ಚೇತರಿಸಿಕೊಂಡಿಲ್ಲ.
ಉಡಾನ್ ದೇಶದ 9 ನಗರಗಳಿಗೆ ವಿಮಾನಯಾನ ಸೇವೆ ಕಲ್ಪಿಸೋದಕ್ಕೆ ಕೇಂದ್ರ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅದರಡಿ ಬೆಳಗಾವಿಯ ಸಾಂಬ್ರಾಗೂ ಕೂಡಾ ವಿಮಾನಯಾನ ಸೇವೆ ಕಲ್ಪಿಸಲಾಗಿತ್ತು. ಲಾಕ್ಡೌನ್ಗೂ ಮುಂಚೆ ದಿನಕ್ಕೆ ಐದು ವಿಮಾನಯಾನ ಸಂಸ್ಥೆಗಳಿಂದ ಸುಮಾರು 28 ವಿಮಾನಗಳು ಬಂದು ಹೋಗುತ್ತಿದ್ದವು. ಆದರೀಗ ಅವುಗಳ ಸಂಖ್ಯೆ 17ಕ್ಕೆ ಇಳಿದಿದೆ.
ಕೊರೊನಾ ಸೋಂಕಿನ ಕಾರಣಕ್ಕೆ ತಿರುಪತಿಯ ದೇವಾಲಯ ಭಕ್ತರಿಗೆ ಇನ್ನೂ ಮುಕ್ತವಾಗಿಲ್ಲ. ಇದರಿಂದ ಬೆಳಗಾವಿಯಿಂದ ತಿರುಪತಿಗೆ ಹಾಗೂ ಕಡಪಾಗೆ ವಿಮಾನಯಾನ ಸೇವೆಯನ್ನು ಇನ್ನೂ ಆರಂಭಿಸಿಲ್ಲ. ಲಾಕ್ಡೌನ್ಗೆ ಮೊದಲು ಈ ವಿಮಾನ ನಿಲ್ದಾಣದಿಂದ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದರು. ಈಗ ಮತ್ತೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವಿಮಾನಯಾನ ಸೇವೆ ಆರಂಭಿಸಲಾಗಿದೆ. ಪ್ರಯಾಣಿಕರನ್ನು ಸೆಳೆಯಲಾಗುತ್ತಿದೆ ಎನ್ನುತ್ತಾರೆ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ.
ಕೋವಿಡ್ ನಿಯಮಾವಳಿಗಳನ್ನು ರೂಪಿಸಿದ್ದು, ಅವುಗಳನ್ನು ಆಧರಿಸಿ ವಿಮಾನಯಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಕ್ರಮಗಳಿಂದ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಮಾನಯಾನ ಚೇತರಿಕೆಗೊಳ್ಳುವ ವಿಶ್ವಾಸವಿದೆ.