ಬೆಳಗಾವಿ: ಜಿಲ್ಲಾ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಚರ್ಚೆ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಯನ್ನಾಗಿ ವಿಂಗಡಿಸುವ ಬಗ್ಗೆ ಸಚಿವ ಉಮೇಶ್ ಕತ್ತಿ ಒಲವು ತೋರಿದ್ದಾರೆ. ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಗಳಾಗಿ ವಿಂಗಡಿಸುವಂತೆ ಕೋರಿ ಉಮೇಶ್ ಕತ್ತಿ ಶೀಘ್ರವೇ ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಸಚಿವ ಉಮೇಶ್ ಕತ್ತಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಸಾಥ್ ನೀಡಿದ್ದಾರೆ. ಇನ್ನೊಂದೆಡೆ ಸಚಿವ ಉಮೇಶ್ ಕತ್ತಿ ಹೇಳಿಕೆ ಗೋಕಾಕ್ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಜಾರಕಿಹೊಳಿ ಸಹೋದರರ ಆಪ್ತ, ಮಾಜಿ ಜಿ.ಪಂ. ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಪ್ರತಿಕ್ರಿಯೆ ನೀಡಿದ್ದು, ಜೆ.ಹೆಚ್. ಪಟೇಲ್ ಸಿಎಂ ಆಗಿದ್ದಾಗ ಗೋಕಾಕ್, ಚಿಕ್ಕೋಡಿ, ಬೆಳಗಾವಿ ಜಿಲ್ಲೆಯ ವಿಭಜನೆಯ ಗೆಜೆಟ್ ನೋಟಿಫಿಕೇಷನ್ ಆಗಿತ್ತು. ರಾಜಕೀಯ ಕಾರಣಗಳಿಂದ ಅದು ರದ್ದಾಗಿ ಬೆಳಗಾವಿ ಜಿಲ್ಲೆ ವಿಭಜನೆಯಾಗಲಿಲ್ಲ. ಈ ಸಂಬಂಧ ಗೋಕಾಕ್ ಜನ ಹೋರಾಟ ಮಾಡಿಕೊಂಡೇ ಬಂದಿದ್ದಾರೆ.
ಆದರೆ ಸಚಿವ ಉಮೇಶ ಕತ್ತಿ ಅವರು ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆ ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಗೋಕಾಕ್ಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ಸಚಿವ ಉಮೇಶ್ ಕತ್ತಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಆಗ್ರಹ ಮಾಡುತ್ತೇವೆ. ಜಾರಕಿಹೊಳಿ ಸಹೋದರರ ಜೊತೆಗೂ ಮಾತನಾಡುತ್ತೇವೆ. ಗೋಕಾಕ್ ಜಿಲ್ಲೆ ಮಾಡಬೇಕು ಎಂಬುದು ನಮ್ಮ ವಿನಂತಿ. ಅಗತ್ಯ ಬಿದ್ದರೆ ಸಿಎಂ, ಪ್ರತಿಪಕ್ಷ ನಾಯಕರ ಬಳಿ ಹೋಗಿ ಮನವಿ ಮಾಡುತ್ತೇವೆ ಎಂದು ಡಾ.ರಾಜೇಂದ್ರ ಸಣ್ಣಕ್ಕಿ ಇದೇ ವೇಳೆ ತಿಳಿಸಿದ್ದಾರೆ.
ಓದಿ : ಅಲ್ ಖೈದಾ ಮುಖ್ಯಸ್ಥನ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ: ಲಕ್ಷ್ಮಣ ಸವದಿ