ಬೆಳಗಾವಿ: ನೆರೆ ಹಾವಳಿ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ. ಆದ್ದರಿಂದ ಮಧ್ಯಾಹ್ನ ಕಿತ್ತೂರು ಉತ್ಸವಕ್ಕೆ ಆಗಮಿಸುವುದು ಅನುಮಾನ. ಈ ಕುರಿತು ಸಿಎಂ ಜತೆ ಸಮಾಲೋಚನೆ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಕಿತ್ತೂರು ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ಮೆರವಣಿಗೆಯೊಂದಿಗೆ ಚಾಲನೆ ಸಿಕ್ಕಿದೆ. ಸಂಜೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿರುವುದರಿಂದ ಕಿತ್ತೂರು ಉತ್ಸವ ಮಾಡಬೇಕಾ? ಎಂಬ ಪ್ರಶ್ನೆ ಮೂಡಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಇಲ್ಲಿನ ಜನರ ನಾಡಿ ಮಿಡಿತ ಅರ್ಥ ಮಾಡಿಕೊಂಡು ಎಲ್ಲರ ಅಭಿಪ್ರಾಯ ಪಡೆದುಕೊಂಡು ಸರಳ ರೀತಿಯಲ್ಲಿ ಉತ್ಸವ ಆಚರಣೆ ಮಾಡಲಾಗುತ್ತಿದೆ. ಉತ್ಸವದಿಂದ ಚನ್ನಮ್ಮಳ ಸ್ಪೂರ್ತಿ, ಸಾಹಸ ಇಂದಿನ ಯುವಕರಿಗೆ ಮಾರ್ಗದರ್ಶನವಾಗಬೇಕು ಎಂದರು.
ಇನ್ನು ಜಿಲ್ಲೆಯಲ್ಲಿ ಮತ್ತೊಮ್ಮೆ ಪ್ರವಾಹ ಬಂದಿದೆ. ಈಗಾಗಲೇ ಸಚಿವರು, ಅಧಿಕಾರಿಗಳು ಪ್ರವಾಹ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಅಗತ್ಯ ಕ್ರಮಕೈಗೊಳ್ಳಲಾಗಿದೆ. ಗೋಕಾಕ್ನಲ್ಲಿ ಗುಡ್ಡದ ಮೇಲಿನ ಬಡ್ಡೆಗಳು ಉರುಳುತ್ತಿರುವ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅಗತ್ಯ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.