ಬೆಳಗಾವಿ: ಕರ್ನಾಟಕದಲ್ಲಿ ನಿದ್ದೆ ಮಾಡುತ್ತಿರುವ ಸರ್ಕಾರವಿದೆ. ರಾಜ್ಯದ ಜನರ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತಂದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರದಿಂದ ಸುವರ್ಣ ಸೌಧದವರೆಗೆ 'ಸುವರ್ಣ ಸೌಧ ಚಲೋ' ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಹಲಗಾ ಗ್ರಾಮದ ಬಳಿ ಪಾದಯಾತ್ರೆಯಲ್ಲಿ ಭಾಗಿಯಾಗಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ನಿದ್ದೆ ಮಾಡುತ್ತಿರುವ ಸರ್ಕಾರವಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಪ್ರವಾಹ, ಅತಿವೃಷ್ಟಿ ಮತ್ತು ಬರ ರಾಜ್ಯದ ಜನರನ್ನ ಕಾಡುತ್ತಿದೆ ಎಂದರು.
ಜುಲೈ, ಅಗಸ್ಟ್ ನಲ್ಲಿ ಪ್ರವಾಹ ಬಂದಾಗ ಖಾನಾಪುರಕ್ಕೆ ಬಂದಿದ್ದೆ. ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿದ್ದೆವು. ಸುಮಾರು 31ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ. 31ಲಕ್ಷ ಎಕರೆಯಲ್ಲಿ ಬೆಳೆದ ಶೇಕಡಾ 71ರಷ್ಟು ಬೆಳೆ ನಷ್ಟವಾಗಿದೆ. ನನ್ನ ಕಾಲದಲ್ಲೂ ಬರ ಬಂದಿತ್ತು. ಆಗ ಎಲ್ಲದಕ್ಕೂ ಪರಿಹಾರ ನೀಡಿದ್ದೆವು ಎಂದು ಬೊಮ್ಮಾಯಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ. 2019ರಲ್ಲಿ ಬಿದ್ದ ಮನೆಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ನಾವು ಜಾರಿ ಮಾಡಿದ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಅಕ್ಕಿ ಕೊಡುವುದು, ಶಾದಿ ಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇದು ಲಜ್ಜೆಗೆಟ್ಟ ಸರ್ಕಾರ. ಇಂದು ಅಧಿವೇಶನದಲ್ಲಿ ನೆರೆ ಪ್ರವಾಹದ ಕುರಿತು ಮಾತನಾಡುತ್ತೇನೆ. ಖಾನಾಪುರ ಸೇರಿದಂತೆ ಎಲ್ಲರ ಕುರಿತು ಮಾತನಾಡುತ್ತೇನೆ ಎಂದು ಹೇಳಿದ್ರು.