ಬೆಳಗಾವಿ : ಕೇಸರಿ ಧ್ವಜ ಹಿಂದೂಗಳಿಗೆ ಸೀಮಿತವಾಗಿಲ್ಲ. ಅದೊಂದು ತ್ಯಾಗದ ಸಂಕೇತ. ತ್ಯಾಗದ ಮನೋಭಾವ ಇರುವವರು ಮಾತ್ರ ಭಗವಾ ಧ್ವಜವನ್ನ ಧರಿಸುತ್ತಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಕಾಗವಾಡದಲ್ಲಿ ಮಾತನಾಡಿದ ಅವರು, ಕೆಂಪುಕೋಟೆಯ ಮೇಲೆ ಭಗವಾ ಧ್ವಜ ಹಾರಿಸುತ್ತೇವೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈಶ್ವರಪ್ಪ ಅವರ ಹೇಳಿಕೆ ಅವರ ವೈಯಕ್ತಿಕ ಭಾವನೆ. ಯಾರಲ್ಲಿ ತ್ಯಾಗದ ಮನೋಭಾವ ಇರುತ್ತದೆಯೋ ಅವರು ಆ ಉಡುಪನ್ನು ತೊಡಬೇಕಾಗುತ್ತದೆ.
ದೇಶಕ್ಕಾಗಿ, ಸಮಾಜಕ್ಕಾಗಿ ತಾನು ತ್ಯಾಗ ಮಾಡುತ್ತೇನೆ ಎನ್ನುವವರು ಅದನ್ನ ಧರಿಸುತ್ತಾರೆ. ಇದೇ ವಿಚಾರದಲ್ಲಿ ಈಶ್ವರಪ್ಪ ಅವರು ಹೇಳಿರಬಹುದು ಎಂದು ಅವರ ಹೇಳಿಕೆಯನ್ನು ಲಕ್ಷ್ಮಣ ಸವದಿ ಸಮರ್ಥಿಸಿಕೊಂಡರು.
ಇದನ್ನೂ ಓದಿ: ಹಿಜಾಬ್- ಕೇಸರಿ ವಿವಾದ- ಎನ್ಐಎ ತನಿಖೆ ಆಗಬೇಕು: ಶಾಸಕ ರಘುಪತಿ ಭಟ್
ಹಿಜಾಬ್ ವರ್ಸಸ್ ಕೇಸರಿ ವಿಚಾರಕ್ಕೆ, ಈಗಾಗಲೇ ಹೈಕೋರ್ಟ್ ವಾದ ವಿವಾದ ಪ್ರಾರಂಭಿಸಿದ್ದು, ನಿನ್ನೆ(ಗುರುವಾರ) ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅದನ್ನು ನಾವೆಲ್ಲರೂ ಪಾಲಿಸಬೇಕು.
ಸಂವಿಧಾನ ಮತ್ತು ನ್ಯಾಯಾಲಯಕ್ಕೆ ಗೌರವ ಕೊಡುವ ಕೆಲಸವನ್ನು ಎಲ್ಲರೂ ಮಾಡಬೇಕು. ಕೊನೆಯ ಆದೇಶ ಬರುವವರೆಗೆ ಎರಡು ಕೋಮಿನ ಜನರು ಶಾಂತಿಯಿಂದ ವರ್ತಿಸಬೇಕು ಎಂದು ಸವದಿ ಮನವಿ ಮಾಡಿದರು.