ಬೆಳಗಾವಿ: ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ಕೈಗೊಂಡು ನೋಂದಾಯಿತ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು.
![ramesh jarakiholi talk about covid Vaccine news](https://etvbharatimages.akamaized.net/etvbharat/prod-images/kn-bgm-08-27-kdp-meeting-overall-7201786_27012021174353_2701f_1611749633_996.jpg)
ಓದಿ: ನಾವು ಮುಂಬೈ ಕರ್ನಾಟಕದವರು, ಮುಂಬೈ ನಮ್ಮದು: ಮಹಾ ಸಿಎಂಗೆ ಡಿಸಿಎಂ ಸವದಿ ತಿರುಗೇಟು
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಮಾಹಿತಿ ನೀಡಿದ ಡಿಎಚ್ಒ ಡಾ. ಶಶಿಕಾಂತ ಮುನ್ಯಾಳ, ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಎರಡನೇ ಹಂತದ ನೋಂದಣಿ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮ ಕಂಡುಬಂದಿಲ್ಲ. ಕ್ಷಯರೋಗ, ಪೋಲಿಯೋ ಸೇರಿದಂತೆ ಎಲ್ಲಾ ರೀತಿಯ ಲಸಿಕಾ ಕಾರ್ಯಕ್ರಮಗಳು ಕೂಡ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುತ್ತಿದೆ ಎಂದರು.
ನೋಂದಾಯಿತ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡುವಂತೆ ಸಚಿವರು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಬೀಜ-ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಕೆಲವು ದೂರುಗಳು ಬಂದಿವೆ. ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದರು.
ಮೂಲಸೌಕರ್ಯ ದುರಸ್ತಿಗೆ ಸೂಚನೆ:
ಜಿಲ್ಲೆಯಾದ್ಯಂತ ವಿಶೇಷವಾಗಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಮತ್ತಿತರ ಮೂಲ ಸೌಕರ್ಯಗಳ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಅನೇಕ ರಸ್ತೆಗಳು ಹದಗೆಟ್ಟಿರುವುದರಿಂದ ಸಂಚಾರಕ್ಕೆ ತೀವ್ರ ಅನಾನುಕೂಲವಾಗುತ್ತಿದೆ. ಇಂತಹ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಹಾಗೂ ಕೆಶಿಪ್ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಾರಕಿಹೊಳಿ ಸೂಚನೆ ನೀಡಿದರು.