ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇ ಒಳ್ಳೆಯದಾಯ್ತು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದರು.
ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಲಖನ್ ಜಾರಕಿಹೊಳಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಾನೇ ನಿಲ್ಲಿಸಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಲಖನ್ ಜಾರಕಿಹೊಳಿ ಪಕ್ಷೇತರ ನಿಂತಿದ್ದು ಬಹಳ ಖುಷಿಯಾಗಿದೆ. ಲಖನ್ ಜಾರಕಿಹೊಳಿ ನಿಂತಿದ್ದೇ ಒಳ್ಳೆಯದಾಯ್ತು, ಇಲ್ಲವಾದರೆ ಅವಿರೋಧ ಆಯ್ಕೆ ಆಗುತ್ತಿತ್ತು. ಲಖನ್ ಜಾರಕಿಹೊಳಿ ಧೈರ್ಯ ಮಾಡದಿದ್ರೆ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದು ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಮೊದಲು ಬಿಜೆಪಿ ಗೆಲ್ಲಿಸಬೇಕು, ನಂತರ ಕಾಂಗ್ರೆಸ್ ಅನ್ನು ಸೋಲಿಸಬೇಕು. ಮಹಾಂತೇಶ ಕವಟಗಿಮಠ ಸ್ವಾಮೀಜಿಗಳು ಲಿಂಗಾಯತರ ದೊಡ್ಡ ಸಂಸ್ಥೆಯಾದ ಕೆಎಲ್‌ಇ ನಿರ್ದೇಶಕರು. ಆದರೆ ಸದ್ಯ ಇರುವ ಲಿಂಗಾಯತ ನಾಯಕಿಯ ಬಗ್ಗೆ ನಾನು ವೈಯಕ್ತಿಕವಾಗಿ ಮಾತನಾಡಲ್ಲ, ದಯವಿಟ್ಟು ನೀವೇ ವಿಚಾರ ಮಾಡಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಎಲ್ಲರಿಗೂ ಸೊಕ್ಕು ಬಂದಾಗ ದೇವರು ಮತ್ತೊಬ್ಬರನ್ನು ತಯಾರು ಮಾಡುತ್ತಾನೆ. ನನಗೆ ಸೊಕ್ಕು ಬಂದ್ರೆ ಮತ್ತೊಬ್ಬ ತಯಾರಾಗ್ತಾನೆ. ಈ ಬಗ್ಗೆ ಜನರೇ ತೀರ್ಮಾನ ಮಾಡಬೇಕು. ನಾವು ಯಾವುದೇ ಜಾತಿ ಆಧಾರಿತವಾಗಿಲ್ಲ. ನಮ್ಮದು ಮಾನವ ಜಾತಿ. ನಾವು ಬಸವಣ್ಣನವರ ತತ್ವ ಸಿದ್ಧಾಂತದ ಮೇಲೆ ಹೋಗುವಂತವರು. ನಿಮ್ಮ ಆಶೀರ್ವಾದ ಸದಾ ಇರಲಿ. ಮೊದಲ ಮತ ಮಹಾಂತೇಶ ಕವಟಗಿಮಠಗೆ ಹಾಕಬೇಕು. ಎರಡನೇ ವೋಟ್ ಯಾರಿಗೆ ಹಾಕಬೇಕು ಎಂಬುದನ್ನು ಅತಿ ಶೀಘ್ರದಲ್ಲೇ ಹೇಳ್ತೀನಿ ಎಂದರು.
ಇದನ್ನೂ ಓದಿ: ಕಲಬುರಗಿ ಪಾಲಿಕೆ ಆಯುಕ್ತರ ಪ್ರಕರಣದಲ್ಲಿ ಯುವತಿ ದೂರು ನೀಡಿಲ್ಲ: ಪೊಲೀಸ್ ಆಯುಕ್ತ ರವಿಕುಮಾರ್