ಬೆಳಗಾವಿ/ಗೋವಾ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೀರಿಯಸ್ ರಾಜಕಾರಣಿ ಅಲ್ಲವೇ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದರು.
ಗೋವಾದ ಕಲಂಗುಟೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೇಶದ ಪಂಚರಾಜ್ಯಗಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣೆ ನಡೆಯುವ ವೇಳೆ ಯಾರಾದರೂ ತಿಂಗಳುಗಟ್ಟಲೇ ರಜೆಯಲ್ಲಿರುತ್ತಾರಾ? ರಾಹುಲ್ ಗಾಂಧಿ ಸೀರಿಯಸ್ ಪೊಲಿಟಿಷಿಯನ್ ಅಲ್ಲ, ಅವರ ಪಕ್ಷವೇ ಅವರನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಒಂದಾದ ಮೇಲೆ ಒಂದರಂತೆ ಸತತ ಹಿನ್ನಡೆ ಅನುಭವಿಸಿದ್ದಾರೆ. ಹತ್ತು ಚುನಾವಣೆಯಲ್ಲಿ ಸೋತ ಬಳಿಕವೂ ಸಕ್ಸಸ್‌ಫುಲ್ ಲೀಡರ್ ಅಂತಾ ಹೇಳೋಕಾಗುತ್ತಾ? ಎಂದರು.
2014ರಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಯಾವ ಚುನಾವಣೆ ಗೆದ್ದಿದೆ? ಅವರೆಲ್ಲ ಡೈನಸ್ಟಿ ಲೀಡರ್, ಜನರ ಲೀಡರ್ ಅಲ್ವೇ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಮಾತ್ರ ಜನಪರ ನಾಯಕ. ರಾಹುಲ್ ಗಾಂಧಿ ಹೆಸರಲ್ಲಿ ಮತಗಳು ಬೀಳಲ್ಲ.
ಸ್ವಕ್ಷೇತ್ರ ಅಮೇಥಿಯಲ್ಲೇ ರಾಹುಲ್ ಗಾಂಧಿಗೆ ಗೆಲ್ಲಲಾಗಲಿಲ್ಲ. ಮೈನಾರಿಟಿ ಹೆಚ್ಚಿರುವ ಕೇರಳಕ್ಕೆ ರಾಹುಲ್ ಗಾಂಧಿ ಪಲಾಯನ ಮಾಡಿದರು ಎಂದು ಕಾಲೆಳೆದರು.
ಇದನ್ನೂ ಓದಿ: ಸಿದ್ದರಾಮಯ್ಯ ಮುಂದಿನ ಚುನಾವಣೆಗಾಗಿ ಸಿದ್ದ'ರಹೀಮ್'ಯ್ಯ ಆಗುತ್ತಾರೆ : ಪ್ರತಾಪ್ ಸಿಂಹ
ಬಿಜೆಪಿಯಿಂದ ಎಲ್ಲರ ರಕ್ಷಣೆ : ನಮ್ಮದು ರಾಷ್ಟ್ರೀಯ ಹಿತಾಸಕ್ತಿ ಪಾರ್ಟಿ, ಬಿಜೆಪಿಯಿಂದ ಮಾತ್ರ ಎಲ್ಲರ ರಕ್ಷಣೆ ಸಾಧ್ಯ ಎಂದು ಸಿ ಟಿ ರವಿ ವಲಸೆ ಕನ್ನಡಿಗರಿಗೆ ಅಭಯ ನೀಡಿದ್ದಾರೆ. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ನಮ್ಮ ಘೋಷಣೆಯಾಗಿದೆ. ಎಲ್ಲರೂ ಜೊತೆ ಕೂಡಿಕೊಂಡು ನಾವು ಕೆಲಸ ಮಾಡುವಂತವರು ಎಂದು ಸಿ ಟಿ ರವಿ ಹೇಳಿದರು.
ಗೋವಾದಲ್ಲಿ ಕೆಲವರು ಕನ್ನಡಿಗರನ್ನು ಹೆದರಿಸುವ ಕೆಲಸ ಮಾಡ್ತಿದ್ದಾರಂತೆ. ನಮ್ಮ ಬಿಜೆಪಿ ಸರ್ಕಾರ ಎಲ್ಲರಿಗೂ ರಕ್ಷಣೆ ಕೊಟ್ಟಿದೆ. ಯಾರು ಯಾರಿಗೂ ಹೆದರಬೇಕಿಲ್ಲ. ಇಲ್ಲಿನ ಒಂದು ಪಂಚಾಯತ್‌ನವರು ಕರೆಂಟ್, ಕುಡಿಯುವ ನೀರು ಕಟ್ ಮಾಡುತ್ತೇವೆ. ಬುಲ್ಡೋಜರ್ನಿಂದ ಮನೆ ಒಡೀತಿನಿ ಅಂತಾ ಹೆದರಿಸುತ್ತಿದ್ದಾರೆ.
ಹಾಗೆಲ್ಲ ಹೆದರಿಸುವ ಕಾಲ ಹೋಗಿದೆ. ಹಾಗೆಲ್ಲ ಹೆದರಿಸಿದರೆ ಅವರನ್ನೆಲ್ಲ ಜೈಲಿಗೆ ಕಳಿಸಿ ಗೋವಾ ಕನ್ನಡಿಗರ ಹಾಗೂ ಇಲ್ಲಿಯ ಜನರನ್ನು ಬಿಜೆಪಿ ರಕ್ಷಣೆ ಮಾಡಲಿದೆ ಎಂದು ಅಭಯಹಸ್ತ ನೀಡಿದರು.