ಬೆಳಗಾವಿ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ಮತ್ತು ಡೆಲ್ಟಾ ಪ್ಲಸ್ ವೈರಾಣು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸವದತ್ತಿಯ ರೇಣುಕಾ ದೇವಿಯ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಜಿಲ್ಲಾಧಿಕಾರಿ, ಸಾರ್ವಜನಿಕರ ಮತ್ತು ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ -19, ಡೆಲ್ಟಾ ಪ್ಲಸ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಮುಂಜಾಗೃತಾ ಕ್ರಮವಾಗಿ ಸಂಹಿತೆ 144ರಡಿ ಸವದತ್ತಿ ತಾಲೂಕಿನ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನ, ಜೋಗುಳಭಾವಿ ಸತ್ತೆಮ್ಮ ದೇವಿಯ ದೇವಸ್ಥಾನದ ಸಾರ್ವಜನಿಕ ದರ್ಶನವನ್ನು ಹಾಗೂ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಅಂಗಡಿಗಳನ್ನು ತೆರೆಯುವುದನ್ನು ಇಂದಿನಿಂದ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ದೇವಸ್ಥಾನಗಳ ಆಡಳಿತ ಮಂಡಳಿಯವರು ಈ ದೇವಸ್ಥಾನಗಳಲ್ಲಿ ನಡೆಯುವ ದಿನನಿತ್ಯದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ಎಲ್ಲ ಮುಂಜಾಗೃತೆ ಕ್ರಮವಹಿಸಿ ನಡೆಸಬೇಕು. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಇತ್ತ ರಾಜ್ಯ ಸರ್ಕಾರ ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಿದ್ದರಿಂದ ಯಲ್ಲಮ್ಮನ ದೇವಸ್ಥಾನದಲ್ಲಿ ಸಕಲ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿದಿನ ಮಾಡಿಕೊಂಡು ಹೋಗುವ ಧಾರ್ಮಿಕ ವಿಧಿವಿಧಾನಗಳನ್ನಷ್ಟೆ ಮಾಡಬೇಕಿದೆ.