ಬೆಳಗಾವಿ: ಜಿಲ್ಲಾ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ಕತ್ತಿ ಕುಟುಂಬದ ಮೂರನೇ ತಲೆಮಾರಿನ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿಯ ಹಿರಿಯ ಪುತ್ರ ಪೃಥ್ವಿ ಕತ್ತಿ ರಾಜಕೀಯಕ್ಕೆ ಧುಮುಕಿದ್ದಾರೆ.
ಹುಕ್ಕೇರಿ ತಾಲೂಕು ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಗೆ ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಿರುವುದಾಗಿ ಪೃಥ್ವಿ ಕತ್ತಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇದೇ 23ಕ್ಕೆ ಚುನಾವಣೆ ನಡೆಯಲಿದ್ದು, ಕತ್ತಿ ಬಣದಿಂದ ಪೃಥ್ವಿ ಸ್ಪರ್ಧಿಸಿದ್ದಾರೆ.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಕಳೆದ ಹಲವು ದಶಕಗಳಿಂದ ಕತ್ತಿ ಕುಟುಂಬ ಹಿಡಿತದಲ್ಲಿದೆ. ರಮೇಶ್ ಕತ್ತಿ ಅವರ ದ್ವಿತೀಯ ಪುತ್ರ ಪವನ್ ಕತ್ತಿ ನಾಗರಮುನವಳ್ಳಿ ಜಿಪಂ ಕ್ಷೇತ್ರದ ಸದಸ್ಯರಾಗಿದ್ದಾರೆ. ಅಲ್ಲದೆ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರ ಪುತ್ರ ನಿಖಿಲ್ ಕತ್ತಿ ಕೂಡ ಅಮ್ಮಣಗಿ ಜಿಪಂ ಕ್ಷೇತ್ರದ ಸದಸ್ಯರಾಗಿದ್ದಾರೆ.
ಈ ಇಬ್ಬರು ಕಳೆದ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಭಾರೀ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಜಿಪಂ ಅಖಾಡದ ಮೂಲಕ ಕತ್ತಿ ಕುಟುಂಬದ ಮೂರನೇ ತಲೆಮಾರಿನ ಕುಡಿಗಳು ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಇದೀಗ ರಮೇಶ್ ಕತ್ತಿ ಅವರ ಹಿರಿಯ ಪುತ್ರ ಪೃಥ್ವಿ ಕತ್ತಿ ಕೂಡ ರಾಜಕೀಯ ಅಖಾಡಕ್ಕಿಳಿದಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹುಕ್ಕೇರಿ ವಿಧಾನಸಭೆ ಕ್ಷೇತ್ರದಿಂದ 1985ರಲ್ಲಿ ವಿಶ್ವನಾಥ ಕತ್ತಿ ಅವರು ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಅದೇ ವರ್ಷ ವಿಶ್ವನಾಥ ಕತ್ತಿ ಅವರ ಅಕಾಲಿಕ ನಿಧನದಿಂದ ನಡೆದ ಉಪ ಚುನಾವಣೆಯಲ್ಲಿ ಉಮೇಶ್ ಕತ್ತಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.
ಈವರೆಗೆ 9 ಚುನಾವಣೆಗಳಲ್ಲಿ ಉಮೇಶ್ ಕತ್ತಿ 8 ಸಲ ಗೆಲುವು ದಾಖಲಿಸಿದ್ದಾರೆ. 2005ರಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿದಾಗ ಸ್ವತಃ ಉಮೇಶ್ ಕತ್ತಿ ಪರಾಭವಗೊಂಡಿದ್ದರು. ಹೀಗಾಗಿ ಹುಕ್ಕೇರಿ ಕ್ಷೇತ್ರದಲ್ಲಿ 1985ರಿಂದಲೇ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ.