ಬೆಳಗಾವಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ಮಾಡಬೇಕೆಂದು ಆ ಭಾಗದ ಸದಸ್ಯರು ನಿನ್ನೆ ವಿಧಾನ ಪರಿಷತ್‌ನಲ್ಲಿ ಒತ್ತಾಯ ಮಾಡಿದ್ದರು. ಅದರಂತೆ ಇಂದು ಪರಿಷತ್‌ನಲ್ಲಿ ಉತ್ತರ ಕರ್ನಾಟಕದ ಹಲವು ಯೋಜನೆಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಜಾರಿಯಲ್ಲಿ ಇಚ್ಛಾಶಕ್ತಿ ತೋರಬೇಕು. ಮಹಾದಾಯಿ ಯೋಜನೆಗೆ ಟೆಂಡರ್ ಕರೆಯಬೇಕು, ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ನ್ಯಾಯಾಧೀಕರಣದ ತೀರ್ಪು ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಮಾಡಬೇಕು ಹಾಗೂ ನ್ಯಾಯಾಧೀಕರಣ ತೀರ್ಪಿನ ತಡೆ ತೆರವಿಗೆ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟ ಜ್ವಲಂತ ಸಮಸ್ಯೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ನೀರಾವರಿ ಯೋಜನೆಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಗಮನ ಸೆಳೆದರು. ಮಹದಾಯಿ ಯೋಜನೆ ಕುರಿತು ಮೊದಲು ಪ್ರಸ್ತಾಪಿಸಿದ ಶ್ರೀಕಂಠೇಗೌಡ, ರಾಜ್ಯದ ಪ್ರಮುಖ ನದಿಗಳಲ್ಲಿ ಮಹದಾಯಿ ಒಂದು, ಕರ್ನಾಟಕದ ಕನಕಂಬಿಯಲ್ಲಿ ಹುಟ್ಟುವ ನದಿ 77 ಕಿಲೋಮೀಟರ್ ಇದೆ. ಗೋವಾ, ಮಹಾರಾಷ್ಟ್ರ ಮೂಲಕ ಅರಬ್ಬಿ ಸಮುದ್ರ ಸೇರಲಿದೆ ಎಂದು ಹೇಳಿದರು.
ವಾಸ್ತವವಾಗಿ ಕಳಸಾ-ಬಂಡೂರಿ ಯೋಜನೆ ಮೂಲಕ ಹುಬ್ಬಳ್ಳಿ-ಧಾರವಾಡ ಅವಳಿನಗರ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಯ ಕುಡಿಯುವ ನೀರಿನ ಮಹತ್ವದ ಯೋಜನೆಯಾಗಿದೆ. ಕಳೆದ ಮೂರು ದಶಕದಿಂದ ನಿರಂತರ ಹೋರಾಟ ನಡೆಯುತ್ತಾ ಬಂದಿದೆ. ನರಗುಂದ-ನವಲಗುಂದದಲ್ಲಿ ಇಂದಿಗೂ ರೈತರು ಬೀದಿಯಲ್ಲಿ ಹೋರಾಟ ಮಾಡುತ್ತಲೇ ಇದ್ದಾರೆ ಎಂದರು.
13.48 ಟಿಎಂಸಿ ನೀರು ರಾಜ್ಯ ಬಳಸಿಕೊಳ್ಳಲು ಒಪ್ಪಿಗೆ : 100ಕ್ಕೂ ಹೆಚ್ಚು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಆದರೂ ಗೋವಾ ತಗಾದೆ ತೆಗೆದಿದೆ. ಎಸ್.ಆರ್ ಬೊಮ್ಮಾಯಿ ಮತ್ತು ಪ್ರತಾಪ್ ಸಿಂಗ್ ರಾಣೆ ಮಾತುಕತೆ ನಡೆಸಿ 46 ಟಿಎಂಸಿ ನೀರು ಬಳಕೆಗೆ ಒಪ್ಪಿಕೊಳ್ಳಲಾಗಿತ್ತು. ಆದರೆ, ನಂತರ ಗೋವಾ ತಕರಾರು ತೆಗೆದ ಕಾರಣ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ.
ನಂತರ ಈಗ ನ್ಯಾಯಾಧೀಕರಣದ ತೀರ್ಪು ಬಂದಿದೆ. 188 ಟಿಎಂಸಿ ನೀರಿನಲ್ಲಿ 13.48 ಟಿಎಂಸಿ ನೀರು ರಾಜ್ಯ ಬಳಸಿಕೊಳ್ಳಲು ಒಪ್ಪಿಗೆ ನೀಡಿದೆ. ಆದರೆ, ಗೋವಾ ನಿರಂತರವಾಗಿ ಅಸಮ್ಮತಿ ವ್ಯಕ್ತಪಡಿಸುತ್ತಲೇ ಬಂದಿದೆ. ತೀರ್ಪು ಬಂದರೂ ಅಡ್ಡಿಪಡಿಸುತ್ತಿದೆ. ಕುಡಿಯಲು 5.5 ಟಿಎಂಸಿ ನೀರು ಬಳಸಿಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಬೇಕು ಎಂದು ಹೇಳಿದರು.
ನ್ಯಾಯಾಧಿಕರಣದ ತೀರ್ಪು ಗೆಜೆಟ್ ನೋಟಿಫಿಕೇಷನ್ ಆಗಿದೆ. ಅರಣ್ಯ ಪರಿಸರ ಅನುಮತಿ ಪಡೆದು ಯೋಜನೆ ಜಾರಿಗೆ ಸೂಚಿಸಲಾಗಿದೆ. ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಆಯೋಗದ ವರದಿ ಅನುಷ್ಠಾನದ ಸವಾಲು ನಿಮ್ಮ ಮುಂದಿದೆ. ನೀವು ಯೋಜನೆ ಜಾರಿಗೆ ಕೂಡ ಹಿಂದೆ ಪಾದಯಾತ್ರೆ ಕೂಡ ಮಾಡಿದ್ದವರು.
ಈಗ ನೀವು ಟೆಂಡರ್‌ಗೆ ನೇರವಾಗಿ ಹೋಗಬಹುದು. ಅರಣ್ಯ ಪರಿಸರ ಇಲಾಖೆ ಅನುಮತಿ ಪಡೆದು ಟೆಂಡರ್ ಕರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು. ಈಗ ಟೆಂಡರ್ ಮೂಲಕ ಯೋಜನೆಗೆ ಚಾಲನೆ ನೀಡದ ಹೋದರೆ ಈ ಭಾಗದ ಜನ ಸಹಿಸಲ್ಲ. ಈಗಾಗಲೇ ಯೋಜನೆಗೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಇನ್ನು ಯಾಕೆ ಕಾಯಬೇಕು? ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಟೆಂಡರ್ ಕರೆಯಿರಿ. ಈ ಅಧಿವೇಶನದಲ್ಲೇ ಯೋಜನೆ ಘೋಷಣೆ ಮಾಡಿ ಟೆಂಡರ್ ನಿರ್ಣಯ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಮೊದಲ ಹಂತದ ಯೋಜನೆ ಅನುಷ್ಠಾನದಿಂದ 15.36 ಲಕ್ಷ ಎಕರೆ ನೀರಾವರಿ ಆಗಿದೆ. 13 ಲಕ್ಷ ಎಕರೆ ಬಿ ಸ್ಕೀಂ ನಡಿ ನೀರಾವರಿ ಆಗಬೇಕಿದ್ದು, ಒಟ್ಟು 28 ಲಕ್ಷ ಎಕರೆಗೆ ನೀರು ಪೂರೈಸುವ ಬೃಹತ್ ಯೋಜನೆ ಇದು. ಆಲಮಟ್ಟಿಯಲ್ಲಿ 227 ಟಿಎಂಸಿ ಸಾಮರ್ಥ್ಯ ಇದೆ. ವಾಸ್ತವವಾಗಿ 303 ಟಿಎಂಸಿ ಸಾಮರ್ಥ್ಯ ಜಲಾಶಯ ಕಟ್ಟಿದರೂ ನಾವು 227 ಟಿಎಂಸಿಗೆ ಸೀಮಿತಗೊಳಿಸಿಕೊಂಡಿದ್ದೇವೆ.
ಆದರೆ, ಪೂರ್ಣ ಸಾಮರ್ಥ್ಯದ ನೀರು ಸಂಗ್ರಹ ಮಾಡುವ ಅನುಮತಿ ಕೇಂದ್ರದಿಂದ ಸಿಗಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಿದೆ ಎಂದು ಶ್ರೀಕಂಠೇಗೌಡ ಹೇಳಿದರು. ಆಂಧ್ರ- ತೆಲಂಗಾಣ ರಾಜ್ಯ ವಿಭಜನೆ ನಂತರ ನೀರು ಹಂಚಿಕೆ ಹೆಚ್ಚು ಮಾಡುವಂತೆ ತೆಲಂಗಾಣ ಮೇಲ್ಮನವಿ ಸಲ್ಲಿಸಿದೆ. ನ್ಯಾಯಾಧಿಕರಣದ ಆದೇಶಕ್ಕೆ ತಡೆ ತರಲಾಗಿದೆ. ಇದನ್ನು ತೆರವುಗೊಳಿಸಲು ರಾಜ್ಯ ಪ್ರಯತ್ನ ಮಾಡಬೇಕಿದೆ.
ತೆಲಂಗಾಣ ಮತ್ತು ಆಂಧ್ರಕ್ಕೆ ಕೇಂದ್ರ ಮಣಿದಿದೆ. ನ್ಯಾಯಾಧಿಕರಣದ ತೀರ್ಪಿನಂತೆ ಹೋಗುವ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಕೊಟ್ಟಿಲ್ಲ. ಎರಡೂ ಕಡೆ ಬಿಜೆಪಿ ಸರ್ಕಾರವೇ ಇದ್ದರೂ ಡಬ್ಬಲ್ ಇಂಜಿನ್ ಸರ್ಕಾರ ಇದ್ದರೂ ಉಪಯೋಗವಾಗುತ್ತಿಲ್ಲ. ಹಾಗಾಗಿ, ಕೂಡಲೇ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿ ಎರಡನೇ ಜಲ ನ್ಯಾಯ ಮಂಡಳಿ ತೀರ್ಮಾನದಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಮನವಿ ಮಾಡಬೇಕು ಎಂದರು.
ಕಾಲ ದೂಡಿದರೆ ಅದು ಮತ್ತಷ್ಟು ಹಣದ ಅಗತ್ಯ: 1963ರಲ್ಲಿ ಯೋಜನೆ ಆರಂಭಿಸಲಾಗಿದ್ದು, 58 ವರ್ಷವಾಗಿದೆ. 75 ಸಾವಿರ ಕೋಟಿ ಖರ್ಚಾಗಿದೆ, ಯೋಜನೆಗೆ ಬೆನ್ನುಬಿದ್ದು ಕಾಳಜಿ ತೋರಿದವರು ದೇವೇಗೌಡರು, ಅವರು ಪ್ರಧಾನಿ ಆಗಿದ್ದಾಗ ಸಾಕಷ್ಟು ಅನುದಾನ ಕೊಟ್ಟರು, ಮತ್ತೆ ಯಾವ ಸರ್ಕಾರವೂ ಕಾಳಜಿ ತೋರಲಿಲ್ಲ. ಈಗ ಮತ್ತೆ ಅಂತಹ ಇಚ್ಚಾಶಕ್ತಿ ತೋರುವ ಕೆಲಸವಾಗಬೇಕು. ಈಗ 65 ಸಾವಿರ ಕೋಟಿ ರೂ. ಬೇಕಿದೆ, ಕಾಲ ದೂಡಿದರೆ ಅದು ಮತ್ತಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷ್ಣಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಬರೆದ ರಾಜ್ಯದ ಪತ್ರಕ್ಕೆ ಉತ್ತರವೇ ಬಂದಿಲ್ಲ. ರಾಜ್ಯದ ಯಾವುದೇ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಅನುದಾನ ಪಡೆಯಬೇಕು ಎಂದು ಒತ್ತಾಯಿಸಿದರು.
ಕೂಡಲೇ ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ನ್ಯಾಯಾಧೀಕರಣದ ಅಂತಿಮ ತೀರ್ಪು ಗೆಜೆಟ್ ನೋಟಿಫಿಕೇಷನ್ ಆಗುವಂತೆ ಒತ್ತಡ ಹೇರಬೇಕು. ಮೇಲ್ದಂಡೆ ಮೂರನೇ ಹಂತದ ಯೋಜನೆಯನ್ನು ಸೇರಿಸಿ ಕೃಷ್ಣಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆಯಾಗುವಂತೆ ಮಾಡಬೇಕು, ಬೇರೆ ಬೇರೆ ವಿಚಾರಕ್ಕೆ ಮೋದಿ ಬಳಿ ಹೋಗಿ ಕೂರುತ್ತೀರಾ... ಈ ವಿಚಾರಕ್ಕೆ ಯಾಕೆ ಆಗಲ್ಲ, ಸರ್ವ ಪಕ್ಷ ನಿಯೋಗ ಕರೆಸಿಕೊಳ್ಳಿ, ಬೇಕಾದರೆ ದೇವೇಗೌಡರನ್ನೂ ಕರೆಸಿಕೊಳ್ಳಿ ಎಂದು ಶ್ರೀಕಂಠೇಗೌಡ ಆಗ್ರಹಿಸಿದರು.
ಮೇಕೆದಾಟು ಆರಂಭಿಸಿ : ಇಂದು ನಾವು 177 ಟಿಎಂಸಿ ನೀರನ್ನು ತಿಂಗಳವಾರು ಲೆಕ್ಕದಲ್ಲಿ ತಮಿಳಿನಾಡಿಗೆ ಹರಿಸಬೇಕಿದೆ, ಉಭಯ ರಾಜ್ಯಗಳ ತಿಕ್ಕಾಟಕ್ಕೆ ಶಾಶ್ವತ ಪರಿಹಾರ ಮೇಕೆದಾಟು ಯೋಜನೆಯಾಗಿದೆ. ಬೆಂಗಳೂರು ಕುಡಿಯುವ ನೀರು, ತಮಿಳುನಾಡಿಗೆ ಹರಿಸಲು ಪೂರಕವಾಗಿ 40 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣ ಮಾಡಬಹುದಾಗಿದೆ. ಇದಕ್ಕೆ 9 ಸಾವಿರ ಕೋಟಿ ವೆಚ್ಚವಾಗಲಿದೆ. ಈಗಾಗಲೇ ಡಿಪಿಆರ್‌ಗೆ ಅನುಮತಿ ಸಿಕ್ಕಿದೆ. ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು.
ಈ ವೇಳೆ ಸಚಿವ ಮುರುಗೇಶ್ ನಿರಾಣಿ ಮಧ್ಯಪ್ರವೇಶಿಸಿ, ಉತ್ತರ ಕರ್ನಾಟಕ ಭಾಗಕ್ಕೆ ಸೀಮಿತವಾಗಿ ಚರ್ಚಿಸಿ, ಕಾವೇರಿ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸೋಣ ಎಂದು ಸಲಹೆ ನೀಡಿದರು. ನಿಲುವಳಿ ಸೂಚನೆಯಲ್ಲಿ ಕಾವೇರಿಯನ್ನೂ ಪ್ರಸ್ತಾಪ ಮಾಡಿದ್ದಕ್ಕಾಗಿ ನ್ಯಾಯ ಒದಗಿಸಲು ಅಲ್ಪ ಪ್ರಮಾಣದಲ್ಲಿ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ ಎನ್ನುತ್ತಾ ಕೂಡಲೇ ಮಹಾದಾಯಿ ಟೆಂಡರ್ ಕರೆಯಬೇಕು, ಕೃಷ್ಣಾ ಮೂರನೇ ಹಂತದ ಕುರಿತು ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿ, ಮೇಕೆದಾಡು ಯೋಜನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ನಾಳೆ ಇಡೀ ದಿನ ಪರಿಷತ್ ಕಲಾಪದಲ್ಲಿ ಅವಕಾಶ