ಬೆಳಗಾವಿ: ಕೊರೊನಾ ಕರ್ಫ್ಯೂ ಹಿನ್ನೆಲೆ ಲೋಕಸಭೆ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಯಾವುದೇ ಪಕ್ಷದ ಕಾರ್ಯಕರ್ತರಿಗೆ ವಿಜಯೋತ್ಸವ ಆಚರಣೆಗೆ ಅವಕಾಶವಿಲ್ಲ ಎಂದು ಡಿಸಿಪಿ ಯಶೋಧಾ ವಂಟಗೂಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಿ. ಸುರೇಶ ಅಂಗಡಿ ಅಕಾಲಿಕ ನಿಧನನಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆ ಫಲಿತಾಂಶದ ಸಿದ್ಧತೆ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಾಳೆ ನಡೆಯುವ ಮತ ಎಣಿಕೆಗೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಕೊರೊನಾ ಗೈಡಲೈನ್ಸ್ ಹಾಗೂ ಕೊರೊನಾ ಕರ್ಫ್ಯೂ ಹಿನ್ನೆಲೆ ವಿಜಯೋತ್ಸವಕ್ಕೆ ಅವಕಾಶ ನೀಡಿಲ್ಲ.
ಇದರ ಜೊತೆಗೆ ಏಜೆಂಟ್ಗಳನ್ನು ಬಿಟ್ಟು ಯಾರೂ ಕೂಡ ಮತ ಕೇಂದ್ರದತ್ತ ಬರಬೇಡಿ. ಮತಕೇಂದ್ರಕ್ಕೆ ಬರುವ ಏಜೆಂಟರು ಕಡ್ಡಾಯವಾಗಿ ಕೊರೊನಾ ನೆಗಟಿವ್ ವರದಿ ತರುವುದರ ಜೊತೆಗೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು. ಮತ ಏಣಿಕೆಯ ಸಂಪೂರ್ಣ ಮಾಹಿತಿಯನ್ನು ಕ್ಷಣ ಕ್ಷಣಕ್ಕೂ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗುತ್ತದೆ. ಹೀಗಾಗಿ ಯಾರೂ ಮತ ಏಣಿಕೆ ಕೇಂದ್ರದತ್ತ ಬರಬಾರದು ಎಂದು ತಿಳಿಸಿದ್ದಾರೆ.