ಬೆಳಗಾವಿ: ಬ್ರಿಟಿಷರು, ಮುಸಲ್ಮಾನರಿಗಿಂತ ಕಾಂಗ್ರೆಸ್ನವರೇ ಈ ದೇಶವನ್ನು ಹೆಚ್ಚು ಲೂಟಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು. ಬ್ರಿಟಿಷರು, ಮುಸಲ್ಮಾನರು ಲೂಟಿ ಮಾಡಿದ್ದಕ್ಕಿಂತ ಹೆಚ್ಚು ಕಾಂಗ್ರೆಸ್ಸಿಗರು ಈ ದೇಶ ಲೂಟಿ ಮಾಡಿದ್ದಾರೆ. ಲೆಕ್ಕ ಇಲ್ಲದಷ್ಟು ಲೂಟಿ ಕಾಂಗ್ರೆಸ್ನಿಂದ ಆಗಿದೆ. ಇವತ್ತು ಕೆಲಸ ಆಗಿಲ್ಲ, ನಾವು ಬಡವರು ಎಂದು ಹಲವರು ಹೇಳುತ್ತಿರುವುದಕ್ಕೆ ಕಾಂಗ್ರೆಸ್ನವರು ಮಾಡಿದ ಪಾಪವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕಾಂಗ್ರೆಸ್ ಮುಕ್ತ ಉತ್ತರ ಕನ್ನಡ ಮಾಡಲಾಗಿದೆ. ಹಲವು ವರ್ಷಗಳ ಶ್ರಮದ ಫಲವಾಗಿ ಇಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೂರು ವಿಧಾನಸಭೆ ಕ್ಷೇತ್ರವನ್ನೂ ಕಾಂಗ್ರೆಸ್ ಮುಕ್ತ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಎಪ್ಪತ್ತು ವರ್ಷದ ಆಡಳಿತ ಅವಧಿಯಲ್ಲಿ ಈ ದೇಶದ ಜನರಿಗೆ ಕೇವಲ 6 ಕೋಟಿ ಸಿಲಿಂಡರ್ ಕೊಟ್ಟಿದ್ದಾರೆ. ಆದರೆ ಮೋದಿ ಸರ್ಕಾರದಲ್ಲಿ ದೇಶದ ಜನರಿಗೆ ಒಂಬತ್ತೂವರೆ ಕೋಟಿ ಸಿಲಿಂಡರ್, ಅದೂ ಉಚಿತವಾಗಿ ಕೊಟ್ಟಿದ್ದೇವೆ ಎಂದರು.