ಅಥಣಿ: ಪುರಸಭೆ ಚುನಾವಣೆಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ ಚಲಾವಣೆ ಮಾಡಿದರು.
ಅಥಣಿ ಪುರಸಭೆಗೆ 27 ವಾರ್ಡ್ಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ 99 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾಸಕ ಮಹೇಶ್ ಕುಮಟಳ್ಳಿ ಅವರು 13ನೇ ವಾರ್ಡ್ನಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾನ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪವಿತ್ರವಾಗಿದೆ. ಎಲ್ಲರೂ ತಮ್ಮ ಹಕ್ಕನ್ನು ಚಲಾವಣೆ ಮಾಡಿ ಎಂದು ಮನವಿ ಮಾಡಿದರು. ಇನ್ನು ಅಥಣಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ 1 ಡಿವೈಎಸ್ಪಿ, 1 ಸಿಪಿಐ, ಮೂವರು ಪಿಎಸ್ಐ, 2 ಕೆಎಸ್ಆರ್ಪಿ, 1 ಡಿಎಆರ್ ಹಾಗೂ 70 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಶಾಸಕರನ್ನು ಗೇಟ್ ಬಳಿ ತಡೆದ ಪೊಲೀಸರು:
ಶಾಸಕ ಮಹೇಶ್ ಕುಮಠಳ್ಳಿ ಮತ ಚಲಾವಣೆಗಾಗಿ ವಾರ್ಡ್ ನಂ.13ನೇ ಮತಗಟ್ಟೆಗೆ ಆಗಮಿಸುತ್ತಿದ್ದಂತೆ ಓರ್ವ ಪೊಲೀಸ್ ಸಿಬ್ಬಂದಿ ಶಾಸಕರಿಗೆ ಗುರುತಿನ ಚೀಟಿ ತೋರಿಸಿ ಒಳಗೆ ಹೋಗುವಂತೆ ಗೇಟ್ನಲ್ಲಿ ತಡೆದ ಪ್ರಸಂಗ ನಡೆಯಿತು. ಈ ವೇಳೆ, ಶಾಸಕರು ಗುರುತಿನ ಚೀಟಿ ಮನೆಯಲ್ಲಿ ಬಿಟ್ಟು ಬಂದಿದ್ದರಿಂದ ಮುಜುಗರಕ್ಕೆ ಒಳಗಾದರು. ನಂತರ ತಮ್ಮ ಮೊಬೈಲ್‌ನಲ್ಲಿರುವ ಗುರುತಿನ ಚೀಟಿ ತೋರಿಸುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಅವರಿಗೆ ಒಳ ಹೋಗುವಂತೆ ಸೂಚಿಸಿದರು.
ಇದನ್ನೂ ಓದಿ: ನಾವೇನು ರಾಜಕಾರಣ ಮಾಡುತ್ತೇವೆಂದು ನಿಮಗೆ ಹೇಳುವ ಅಗತ್ಯವಿಲ್ಲ: ಮಾಧ್ಯಮಗಳ ಮೇಲೆ ಸಿಎಂ ಗರಂ