ಬೆಳಗಾವಿ: ಕ್ಷೇತ್ರದ ಅಭಿವೃದ್ಧಿಗಾಗಿ ಬರೀ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲು ನನಗೆ ಕಷ್ಟ ಕೊಡುತ್ತಿದ್ದಾರೆ. ಅವರ್ಯಾರು ಅಂತ ನಿಮಗೆಲ್ಲಾ ಗೊತ್ತಿದೆ. ಆದರೆ, ಇದ್ಯಾವುದಕ್ಕೂ ನಾನು ಜಗ್ಗುವುದಿಲ್ಲ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಚ್ಚುವರಿಯಾಗಿ ನಿರ್ಮಿಸುತ್ತಿರುವ 4 ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಎಂಎಲ್‍ಎ ಆದ್ಮೇಲೆ ಎಲ್ಲವೂ ಒಳ್ಳೆಯದು ಆಗುತ್ತದೆ ಎಂದುಕೊಂಡಿದ್ದೆ. ಆದರೆ, ಎಂಎಲ್‍ಎ ಆದ ಮೇಲೆಯೇ ಓರ್ವ ಹೆಣ್ಣುಮಗಳಿಗೆ ಜೀವನದಲ್ಲಿ ಎಷ್ಟು ಕಷ್ಟಗಳು ಬರುತ್ತವೆಯೋ ಅಷ್ಟು ಸಂಕಷ್ಟಗಳನ್ನು ನಾನು ಎದುರಿಸುತ್ತಿದ್ದೇನೆ. ಪ್ರತಿ ಹಂತದಲ್ಲಿಯೂ ಸಂಘರ್ಷಗಳು ನಡೆಯುತ್ತಿವೆ. ಆದರೂ ಕ್ಷೇತ್ರದ ಸುಧಾರಣೆಗೆ ಪಣತೊಟ್ಟಿದ್ದೇನೆ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದರೆ ನನ್ನ ಹೆಸರು ಬರುತ್ತದೆ ಎಂದು ಬಹಳಷ್ಟು ತೊಂದರೆ ಕೊಡುತ್ತಿದ್ದಾರೆ. ಆದರೆ, ನಾನು ಯಾವುದಕ್ಕೂ ಜಗ್ಗುತ್ತಿಲ್ಲ. ಅವರದೇ ಸರ್ಕಾರ, ಅವರದೇ ಸಚಿವರು ಇದ್ದರೂ ಕೂಡ ಪ್ರತಿನಿತ್ಯ 1 ಕೋಟಿ ರೂಪಾಯಿ ಕೆಲಸ ಮಾಡುತ್ತಿದ್ದೇನೆ ಎಂದು ಟಾಂಗ್ ನೀಡಿದರು.
ಅಲ್ಲದೇ ಪ್ರತಿಯೊಂದು ಹಂತದಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ನನ್ನ ವಿರೋಧಿಗಳು ನನಗೆ ಅಡ್ಡಗಾಲು ಹಾಕುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ನಾನು ಜಗ್ಗುವುದಿಲ್ಲ. ಅದೆಷ್ಟೇ ಸಂಘರ್ಷಗಳು, ಸವಾಲುಗಳು ಎದುರಾದರೂ ಕೂಡ ನನ್ನ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.