ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರ ಕುಟುಂಬಗಳಿಂದ ನೇರವಾಗಿ ಸೀರೆ ಖರೀದಿಸುವುದು ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ನೇಕಾರರ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಲಿಗೆ ಯಂತ್ರ ಖರೀದಿ, ವಿದ್ಯುತ್ ಮಗ್ಗಗಳ ಅಳವಡಿಕೆ ಸೇರಿದಂತೆ ನೇಕಾರರಿಗೆ ನೀಡಲಾಗುವ ಸೌಲಭ್ಯಗಳ ಹಂಚಿಕೆಯ ಮಾರ್ಗಸೂಚಿ ಇನ್ನಷ್ಟು ಸರಳೀಕರಣಗೊಳಿಸಲಾಗುತ್ತಿದೆ. ಇದಲ್ಲದೇ ನೇಕಾರ ಕುಟುಂಬಗಳ ಸಮಗ್ರ ಸಮೀಕ್ಷೆ ಕೈಗೊಂಡು ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನೇಕಾರರ ಎಲ್ಲ ಬೇಡಿಕೆಗಳು ನ್ಯಾಯಯುತವಾಗಿವೆ. ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನೇಕಾರರ ಪರಿಸ್ಥಿತಿಯ ಅರಿವು ಇರುವುದರಿಂದ ನೇಕಾರರ ಸಮುದಾಯದ ಏಳಿಗೆಗೆ ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.
ಶಾಸಕ ಅಭಯ್ ಪಾಟೀಲ ಮಾತನಾಡಿ, ನೇಕಾರರು ಉತ್ಪಾದಿಸಿರುವ ಸೀರೆಗಳನ್ನು ಸರ್ಕಾರವೇ ಖರೀದಿಸಬೇಕು. ಕಿಸಾನ್ ಸಮ್ಮಾನ್ ಮಾದರಿಯಲ್ಲಿ ನೇಕಾರ ಸಮ್ಮಾನ್ ನಿಧಿ ಸ್ಥಾಪಿಸಬೇಕು. ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕರು, ಚಾಲಕರು ಸೇರಿದಂತೆ ಉಳಿದವರಿಗೆ ₹ 5,000 ನೆರವು ನೀಡಿ ನೇಕಾರರಿಗೆ ಮಾತ್ರ ₹ 2,000 ಪ್ರಕಟಿಸಲಾಗಿದ್ದು, ಈ ತಾರತಮ್ಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಕೀರ್ತಪ್ಪ ಗೋಟೂರ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ ಐದು ಸಾವಿರಕ್ಕೂ ಅಧಿಕ ಕೈಮಗ್ಗ ನೇಕಾರರಿಂದ ದಾಖಲಾತಿ ಪಡೆದುಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಘೋಷಿಸಿರುವ ಪರಿಹಾರಧನ ಶೀಘ್ರವೇ ಜಮಾ ಮಾಡಲಾಗುವುದು. ಅದೇ ರೀತಿ ವಿದ್ಯುತ್ ಮಗ್ಗದ ಮಾಲೀಕರಿಗೂ ಪರಿಹಾರವನ್ನು ನೀಡಲಾಗುವುದು ಎಂದರು.
ಲಾಕ್ಡೌನ್ನಿಂದ ನೇಕಾರರು ಕಷ್ಟಕ್ಕೆ ಸಿಲುಕಿರುವುದರಿಂದ ಮಾರುಕಟ್ಟೆ ಪರಿಸ್ಥಿತಿ ಸುಧಾರಿಸುವವರೆಗೆ ತುರ್ತಾಗಿ ಸೀರೆ ಖರೀದಿ ಸೇರಿದಂತೆ ರೈತರಿಗೆ ನೀಡುವಂತೆ ಶೂನ್ಯ ಬಡ್ಡಿದರದಲ್ಲಿ ನೇಕಾರರಿಗೂ ₹ 3 ಲಕ್ಷ ಸಾಲ ನೀಡಬೇಕು. ಅಸಂಘಟಿತ ಕಾರ್ಮಿಕರ ಪಟ್ಟಿಯಲ್ಲಿ ಕೂಲಿ ನೇಕಾರರನ್ನು ಸೇರ್ಪಡೆಗೊಳಿಸಬೇಕು ಎಂದು ನೇಕಾರರ ಮುಖಂಡರು ಆಗ್ರಹಿಸಿದರು.