ಬೆಳಗಾವಿ: ಮಾತುಕೊಟ್ಟಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿಯವರನ್ನು ನೇಮಕ ಮಾಡಬೇಕೆಂಬ ಅಭಿಲಾಷೆ ಇದೆ ಎಂದು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಬೆಳಗಾವಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ಮಾಜಿ ಸಂಸದ ರಮೇಶ ಕತ್ತಿಯವರನ್ನು ಮಾಡಬೇಕು ಎಂಬುವುದಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡುವ ಕುರಿತಂತೆ ಮೊದಲೇ ಕತ್ತಿಯವರಿಗೆ ಮಾತು ಕೊಡಲಾಗಿದೆ. ಅದರಂತೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಒತ್ತಾಯವನ್ನ ನಾನು ಮಾಡಿದ್ದೇನೆ. ಈ ಕುರಿತು ನಿನ್ನೆ ಮಾತುಕತೆ ಆಗಿದೆ. ಆಗ ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದು ನ.14ರಂದು ನಡೆಯುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ವಿಚಾರಕ್ಕೆ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.
ಶಿರಾ, ಆರ್ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನು ಹರಿಸಿದ್ದಾರೆ ಎಂಬ ಡಿಕೆಶಿ ಆರೋಪಕ್ಕೆ, ಅದರ ಬಗ್ಗೆ ಕಮೆಂಟ್ ಮಾಡುವುದು ಬೇಡ ದೇವರು ಒಳ್ಳೆಯದು ಮಾಡಲಿ. ನಮ್ಮ ಪಕ್ಷ ದೇಶದುದ್ದಕ್ಕೂ ಯಶಸ್ವಿಯಾಗಿ ಬೆಳೆಯುತ್ತಿದೆ. ಇವಿಎಂ ಫಾಲ್ಟ್ ಇದ್ದಿದ್ದರೆ ಕಳೆದ ಭಾರಿ ನಾನು ಕಾಂಗ್ರೆಸ್ ನಲ್ಲಿದ್ದಾಗ ಗೋಕಾಕ್ ಕ್ಷೇತ್ರದಿಂದ ಸೋತು ಈಗ ಮಾಜಿ ಶಾಸಕ ಆಗ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ:
ಕ್ಯಾಬಿನೆಟ್ ಇದ್ದಿದ್ದಕ್ಕೆ ಕೆಲವು ಶಾಸಕರು ಇಲಾಖೆ ಕಾಮಗಾರಿ ಕುರಿತು ಭೇಟಿಗೆ ಬಂದಿದ್ದರು. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿದ್ದು, ಅವರು ನಿರ್ಣಯ ತೆಗೆದುಕೊಂಡಿದ್ದಕ್ಕೆ ಬದ್ಧ ಇದ್ದೇನೆ. ಇದಲ್ಲದೇ ಉಮೇಶ್ ಕತ್ತಿಯವರಿಗೆ ಮಂತ್ರಿ ಮಾಡಲು ಮೊದಲಿನಿಂದಲೂ ಒತ್ತಾಯ ಇದೆ. ಸೀನಿಯರ್ ಆಗಿದ್ದು, ಅವರಿಗೆ ಸಿಕ್ಕರೆ ಒಳ್ಳೆಯದು ಅಂತಾ ಹೇಳಿದ್ದೇನೆ. ಸರ್ಕಾರದಲ್ಲಿ ದೊಡ್ಡ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದು, ಮಂತ್ರಿ ಸ್ಥಾನ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ.
ನನ್ನ ಮೇಲೆ ಗೌರವ ಇರುವುದಕ್ಕೆ ಕೆಲವರು ನನ್ನ ಬಳಿ ಬರ್ತಿದ್ದಾರೆ. ಎಲ್ಲದರಲ್ಲೂ ಎಂಟ್ರಿಯಾಗಬಾರದು ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರ ಪರವಾಗಿ ನಾನು ವಕಾಲತ್ತು ವಹಿಸುವುದಿಲ್ಲ ಎಂದು ರಮೇಶ್ ಹೇಳಿದರು.