ಬೆಳಗಾವಿ : ಕೋವಿಡ್ 3ನೇ ಅಲೆ ಆತಂಕದ ನಡುವೆ ಚುನಾವಣಾ ಆಯೋಗ ತೆಗೆದುಕೊಂಡ ತೀರ್ಮಾನ ಅಚ್ಚರಿಗೆ ಕಾರಣವಾಗಿದ್ದು, ಸಮಾಧಾನ ತಂದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಸುವ ಕುರಿತು ನನಗೆ ಯಾವುದೇ ರೀತಿಯ ಐಡಿಯಾ ಇಲ್ಲ. ಆದರೆ, ಚುನಾವಣೆ ಯಾಕೆ ಘೋಷಣೆ ಮಾಡಿದರೋ? ನನಗಂತು ಆಶ್ಚರ್ಯವಾಗಿದೆ ಎಂದರು.
ಚುನಾವಣೆ ಯಾಕೆ ಘೋಷಣೆ ಮಾಡಿದರು ಅಂತಾ ಹೇಳುವಷ್ಟು ದೊಡ್ಡವನು ನಾನಲ್ಲ. ಚುನಾವಣಾ ಆಯೋಗ ಸದ್ಯದ ಕೋವಿಡ್ ಪರಿಸ್ಥಿತಿಯನ್ನು ಗಮನಿಸಬೇಕಿತ್ತು. ಚುನಾವಣೆ ನಡೆಸುವ ಬಗ್ಗೆ ನ್ಯಾಯಾಲಯ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೂ ಮಾಹಿತಿ ಕೇಳಿದೆ. ಆದರೆ, ಇಂದು ವರದಿ ಸಲ್ಲಿಸುವ ಮುಂಚೆಯೇ ಚುನಾವಣೆ ಘೋಷಣೆ ಮಾಡಿದರೆ ನಾನೇನು ಹೇಳಲಿ. ಚುನಾವಣಾ ಆಯೋಗ ತೆಗೆದುಕೊಂಡ ತೀರ್ಮಾನ ನನಗೆ ಸಮಾಧಾನ ತಂದಿಲ್ಲ ಎಂದರು.
ಬೆಳಗಾವಿ ಗಡಿ ಪ್ರದೇಶವಾಗಿರುವುದರಿಂದ ಸುತ್ತಮುತ್ತಲಿನ ಹಳ್ಳಿ ಜನರು ಬಂದು ಹೋಗುತ್ತಾರೆ. ಕೋವಿಡ್ 3ನೇ ಅಲೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯಾಯಾಲಯ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಇಂತಹ ಸಂದರ್ಭದಲ್ಲಿ ಆಯೋಗ ಚುನಾವಣೆ ಘೋಷಣೆ ಮಾಡಿದ್ರೆ ನಾವು ಯಾರಿಗೆ ಕೇಳೋಣ.? ರಾಜಕೀಯ ಪಕ್ಷವಾಗಿ ನಮ್ಮ ಕೆಲಸ ಏನು ಅದನ್ನು ನಾವು ಮಾಡುತ್ತೇವೆ.
ಯಾರು ಗೆಲ್ತಾರೆ, ಸೋಲ್ತಾರೆ ಅದು ಪ್ರಶ್ನೆ ಬೇರೆ. ಆದರೆ, ಇಡೀ ದೇಶದಲ್ಲಿ ಕೋವಿಡ್ ಇರುವ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಮಾಡಲೇಬೇಕು ಅನೋದು ಏನಿದೆ?. ರಾಜ್ಯ ಸಚಿವ ಸಂಪುಟದಲ್ಲಿಯೂ ಕೂಡ ಯಾವ ಚುನಾವಣೆ ಮಾಡಬಾರದು ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಚುನಾವಣಾ ಆಯೋಗ ತೆಗೆದುಕೊಂಡ ತೀರ್ಮಾನಕ್ಕೆ ಪೂರ್ಣ ಅಧಿಕಾರವಿದೆ. ಹೀಗಾಗಿ, ವಿಧಿ ಇಲ್ಲದೇ ನಾವು ಚುನಾವಣೆ ಮಾಡಬೇಕಷ್ಟೆ ಎಂದರು.
ಇದನ್ನೂ ಓದಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಯ್ತ್‌ರೀ.. ಸೆಪ್ಟೆಂಬರ್ 3ಕ್ಕೆ ನಿಗದಿ ನೋಡ್ರೀ..