ಬೆಳಗಾವಿ : ಇಷ್ಟು ಕೆಟ್ಟದಾಗಿ ಚುನಾವಣೆ ನಡೆದಿರೋದು ಅಪಮಾನ. ಮೇಲ್ಮನೆ ಚಾವಡಿಯಲ್ಲೇ ತೀರ್ಮಾನವಾಗಲಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಇಂಥ ಪರಿಷತ್ ಚುನಾವಣೆ ನೋಡಿಲ್ಲ. ನೀನು ಎಷ್ಟು ಕೊಡ್ತೀಯಾ, ನಾನು ಎಷ್ಟು ಕೊಡ್ತೀನಿ ಅಂತಾ ಚುನಾವಣೆ ನಡೆದಿದೆ. ಇಷ್ಟು ಕೆಟ್ಟದಾಗಿ ಚುನಾವಣೆ ಮಾಡಿರುವುದು ಬಹಳ ಅಪಮಾನದ ವಿಷಯ.
ಚಿಂತಕರ ಚಾವಡಿಯಾದ ವಿಧಾನ ಪರಿಷತ್ ಈಗ ಶ್ರೀಮಂತರ ಚಾವಡಿಯಾಗಿದೆ. ರಾಜಕಾರಣ ಬೇಕು ನಿಜ. ಈಗ ನಡೆದ ಚುನಾವಣೆಯನ್ನು ಈವರೆಗೆ ನಾನು ನೋಡಿಲ್ಲ. ಈ ಬಗ್ಗೆ ಪ್ರಾಮಾಣಿಕ ಚರ್ಚೆ ಆಗಬೇಕು. ಪರಿಷತ್ ಚುನಾವಣೆಗೆ ಹಣದ ಹೊಳೆ ಸುರಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮೇಲ್ಮನೆ ಬೇಕಾ ಎಂಬುದನ್ನು ಚಿಂತಕರ ಚಾವಣಿಯ ಸದಸ್ಯರೇ ಚರ್ಚಿಸಬೇಕು. ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಚುನಾವಣಾ ಆಯೋಗ ಬದುಕಿದೆಯೋ ಸತ್ತಿದೆಯೋ ಅನ್ನೋ ಚರ್ಚೆ ಆರಂಭವಾಗಿದೆ ಎಂದರು.
ಬಹುಮತ ಪಡೆಯುತ್ತೇವೆ : ಇಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬರುತ್ತಿದೆ. ಮೊದಲ ಸುತ್ತಿನಲ್ಲಿ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ 15 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಪೂರ್ಣ ಬಹುಮತ ಬೇಕು ಅನ್ನೋದು ರಾಜ್ಯದ ಜನರ ಬಯಕೆ. ವಿಧಾನ ಪರಿಷತ್‌ನಲ್ಲಿ ಪೂರ್ಣ ಬಹುಮತ ಪಡೆಯುತ್ತೇವೆ. ಯಾವುದೇ ಚುನಾವಣೆಗಳು ಮುಂದಿನ ಚುನಾವಣೆಗಳಿಗೆ ಸಂಬಂಧ ಇರಲ್ಲ. ವಿಧಾನಸಭಾ ಚುನಾವಣೆಯಲ್ಲೂ ಪೂರ್ಣ ಬಹುಮತದಿಂದ ಗೆಲ್ಲುತ್ತೇವೆ ಎಂದರು.
ಎಂಇಎಸ್‌ನವರಿಗೆ ಬೇರೆ ಉದ್ಯೋಗ ಇಲ್ಲ : ಎಂಇಎಸ್ ಬೆಳಗಾವಿ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಎಂಇಎಸ್‌ನವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಜನರು ಅವರನ್ನು ತಿರಸ್ಕಾರ ಮಾಡಿದ್ದಾರೆ ಎಂದು ಕಿಡಿ ಕಾರಿದರು. ಜೀವಂತ ಇದ್ದೇವೆ ಅಂತಾ ಅಲ್ಲೊಂದು ಇಲ್ಲೊಂದು ಪ್ರತಿಭಟನೆ ಮಾಡುತ್ತಾರೆ. ರಾಜ್ಯ ಸರ್ಕಾರ ಅವರಿಗೆ ಯಾವುದೇ ರೀತಿಯ ಸೊಪ್ಪು ಹಾಕಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಎಂಇಎಸ್ ಕರೆ ನೀಡಿದ್ದ ಬೆಳಗಾವಿ ಬಂದ್ಗಿಲ್ಲ ಬೆಂಬಲ.. ನಾಡದ್ರೋಹಿಗಳಿಗೆ ಮತ್ತೊಮ್ಮೆ ಮುಖಭಂಗ