ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ, ಗೋಸಬಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಏತ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಲ್ಲಮರಡಿ ಏತ ನೀರಾವರಿ ಯೋಜನೆ ಮೂಲಕ ಗೋಕಾಕ ತಾಲೂಕಿನ ವಿವಿಧ ಹಳ್ಳಿಗಳ 2,300 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು. ಬಳಿಕ ಅಲ್ಲಿಂದ ತಟಕನಾಳ ಗ್ರಾಮದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಕಲ್ಮಡ್ಡಿ ಏತ ನೀರಾವರಿ ಯೋಜನೆಯಿಂದ ರೈತರಿಗೆ ಆಗುವ ಉಪಯೋಗಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ನೀರಾವರಿ ಇಲಾಖೆ ಅಧಿಕಾರಿ ಮಾತನಾಡಿ, ಕಲ್ಮಡಿ ಏತ ನೀರಾವರಿ ಯೋಜನೆ 161 ಕೋಟಿ ವೆಚ್ಚದ ಕಾಮಗಾರಿಯಾಗಿದ್ದು, ಘಟಪ್ರಭಾ ನದಿ ನೀರನ್ನು ಬಳಸಿಕೊಂಡು ಅಂದಾಜು 2,300 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ. ಗೋಕಾಕ ತಾಲೂಕಿನ ಕೌಜಲಗಿ, ಬಿಲಕುಂದಿ, ಗೋಸಬಾಳ, ಮನ್ನಿಕೇರಿ, ಭಗರನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ ಎಂದರು.
ಓದಿ: ಅಲ್ರೀ ನನಗಿನ್ನೂ ನೋಟಿಸ್ ಬಂದಿಲ್ಲ, ನಿಮ್ ಕಡೆಗೇನಾದ್ರೂ ಇದ್ರೇ ತೋರಿಸ್ರಲ್ಲ.. ಮಾಧ್ಯಮದವರಿಗೆ ಯತ್ನಾಳ್ ಮಾರುತ್ತರ
ಇದೇ ವೇಳೆ ಸುತ್ತಲಿನ ಗ್ರಾಮಸ್ಥರು ಸಚಿವರಿಗೆ ನೀರಾವರಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಸಚಿವರು ರೈತರ ಅಹವಾಲು ಸ್ವೀಕರಿಸಿ, ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.