ಅಥಣಿ (ಬೆಳಗಾವಿ): ವೀರ ಸಾವರ್ಕರ್ ಅವರನ್ನು ಟಿಪ್ಪು ಸುಲ್ತಾನರಿಗೆ ಹೋಲಿಕೆ ಮಾಡುವ ಕಾಂಗ್ರೆಸ್ಸಿನವರಿಗೆ ವೀರ ಸಾವರ್ಕರ್ ಹೆಸರು ಹೇಳುವುದಕ್ಕೂ ಯೋಗ್ಯತೆ ಇಲ್ಲ. ಅವರ ನಾಲಿಗೆಯಲ್ಲಿ ಸಾವರ್ಕರ್ ಹೆಸರು ಬರಬಾರದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬರಬೇಕು ಎಂದು ಇತಿಹಾಸದ ಮಹಾಪುರುಷನನ್ನು ಕಾಂಗ್ರೆಸ್ಸಿನವರು ಗೇಲಿ ಮಾಡುವುದು ಎಷ್ಟು ಸರಿ?. ಕಾಂಗ್ರೆಸ್ಸಿನವರು ಒಂದು ಧರ್ಮದ ರಾಜಕಾರಣ ಓಲೈಕೆ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಈ ರೀತಿ ಮತ ರಾಜಕೀಯಕ್ಕೆ ಇತಿಹಾಸ ಮಹಾಪುರುಷನನ್ನೂ ಗೇಲಿ ಮಾಡುವುದು ಸರಿಯಲ್ಲ ಎಂದರು.
ಅಥಣಿ ಶಾಸಕರು ಕಾರ್ಯಕ್ರಮಕ್ಕೆ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಶಾಸಕ ಕುಮಟಳ್ಳಿ ಅವರಿಗೆ ನ್ಯಾಯಾಲಯದಲ್ಲಿ ವಾರೆಂಟ್ ಇರುವುದರಿಂದ ಬೆಂಗಳೂರಿಗೆ ಹೋಗಿದ್ದಾರೆ. ನಾನು ದೂರವಾಣಿ ಮೂಲಕ ಸಂಪರ್ಕಿಸಿದ್ದೇನೆ ಎಂದು ಸಮಜಾಯಿಷಿ ನೀಡಿದರು.
ಇದೇ ವೇಳೆ ಚಿಕ್ಕೋಡಿ ಉಪವಿಭಾಗದಲ್ಲಿ ಕಳಪೆ ಕಾಮಗಾರಿ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಳಪೆ ಕಾಮಗಾರಿ ಮಾಡದಿರೆ ಅಂತವರ ವಿರುದ್ಧ ಮುಖ್ಯಮಂತ್ರಿಗಳೇ ಕ್ರಮ ಕೈಗೊಳ್ಳುತ್ತಾರೆ. ಯಾರೇ ಕಳಪೆ ಕಾಮಗಾರಿ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ವೋಟಿಗಾಗಿ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ