ಬೆಳಗಾವಿ : ಗಡಿ ಪ್ರದೇಶಗಳಲ್ಲಿನ ಮರಾಠಿ ಭಾಷಿಕರಿಗೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾರಾಷ್ಟ್ರ ಸಚಿವ ಏಕನಾಥ ಶಿಂಧೆ ಅವರಿಗೆ ಮನವಿ ಸಲ್ಲಿಸಿದೆ.
ಸಚಿವ ಏಕನಾಥ ಶಿಂಧೆಯವರನ್ನು ಕೊಲ್ಲಾಪುರದಲ್ಲಿ ಭೇಟಿ ಮಾಡಿದ ಎಂಇಎಸ್ ಮುಖಂಡರು, ಮಾರಾಠಿ ಭಾಷಿಗರನ್ನು ನೆಮ್ಮದಿಯಿಂದ ಬದುಕಲು ಕರ್ನಾಟಕ ಸರ್ಕಾರ ಬಿಡುತ್ತಿಲ್ಲ. ಮರಾಠಿ ಭಾಷಿಗರಿಗೆ ಕರ್ನಾಟಕ ಸರ್ಕಾರ ಪದೇಪದೆ ಅನ್ಯಾಯ ಮಾಡುತ್ತಿದೆ.
ಕಳೆದೆರಡು ವಾರಗಳ ಹಿಂದೆ ಪಾಲಿಕೆ ಕಚೇರಿ ಎದುರಿಗೆ ಕನ್ನಡ ಧ್ವಜಸ್ತಂಭ ನೆಡುವ ಮೂಲಕ ರಾಷ್ಟ್ರ ಧ್ವಜಕ್ಕೆ, ರಾಷ್ಟ್ರ ಗೀತೆಗೆ ಅಪಮಾನ ಮಾಡಿದ್ದಾರೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಾರಾಠಿ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಬೇಕು. ಆ ನಿಟ್ಟಿನಲ್ಲಿ ನೀವು ಬೆಳಗಾವಿಗೆ ಭೇಟಿ ನೀಡಿ, ಮರಾಠಿ ಭಾಷಿಗರ ಪರವಾಗಿ ಪ್ರಚಾರ ಕೈಗೊಳ್ಳಬೇಕು ಎಂದಿದ್ದಾರೆ.
ಜೊತೆಗೆ ಮಹಾರಾಷ್ಟ್ರ ಸರ್ಕಾರದಿಂದ ಸುಪ್ರೀಂಕೋರ್ಟ್ ಗಡಿ ಸಮಸ್ಯೆ, ಮಾರಾಠಿ ಭಾಷಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತು ಬಲವಾದ ವಾದವನ್ನ ಮಂಡಿಸಬೇಕು. ಗಡಿ ಪರಿಸ್ಥಿತಿಯು ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಯಥಾಸ್ಥಿತಿಯಲ್ಲಿ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.